ಸುರತ್ಕಲ್ ಸೆಪ್ಟೆಂಬರ್ 23: ಜಲ್ಲಿಕಲ್ಲು ಸಾಗಾಟದ ಟ್ರಕ್ ನಿಂದ ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್ ಜಂಕ್ಷನ್ ನಲ್ಲಿ ಬಿದ್ದಿದ್ದ ಜಲ್ಲಿಕಲ್ಲನ್ನು ಹೈವೆ ಪ್ಯಾಟ್ರೋಲ್ ವಾಹನದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಗುಡಿಸಿ ತೆಗೆದು ಸಂಭವನೀಯ ಅಪಘಾತವನ್ನು ತಪ್ಪಿಸಿದ್ದಾರೆ.

ಟ್ರಕ್ ನಿಂದ ಹೆದ್ದಾರಿಯ ಮೇಲೆ ಸುಮಾರು 100ಮೀ. ಉದ್ದಕ್ಕೆ ಜಲ್ಲಿಕಲ್ಲು ಹರಡಿಕೊಂಡಿತ್ತು.ಹೆದ್ದಾರಿ ಗಸ್ತು ವಾಹನದಲ್ಲಿದ್ದ ಹೆಡ್‌ಕಾನ್ ಸ್ಟೇಬಲ್ ಮಹಾಂತೇಶ್ ಕಿಲಾರಿ ಮತ್ತು ಚಾಲಕ ಆನಂದ್ ಮೇಟಿಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದ ಭಾರೀ ಪ್ರಮಾಣದ ಜಲ್ಲಿಯನ್ನು ಗಮನಿಸಿ, ತಕ್ಷಣವೇ ತೆರವಿಗೆ ಮುಂದಾಗಿದ್ದಾರೆ. ಜೊತೆಗೆ ಅಲ್ಲೇ ಪಕ್ಕದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ 5-6ಯುವಕರಿಗೆ ಸಂಭವಿಸಬಹುದಾದ ಅಪಘಾತದ ಕುರಿತು ಮನವರಿಕೆ ಮಾಡಿ ಅವರನ್ನು ಕರೆಸಿಕೊಂಡು ಜಲ್ಲಿ ತೆರವು ಮಾಡಿದ್ದಾರೆ.
ಸುಮಾರು 10 ಬುಟ್ಟಿಗಳಷ್ಟಿದ್ದ ಜಲ್ಲಿಯನ್ನು ಯುವಕರು ಮತ್ತು ಪೊಲೀಸರು ಗುಡಿಸಿ ತೆಗೆದು ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾಹನ ಕರೆಸಿ ಅದಕ್ಕೆ ತುಂಬಿಸಿ ಕಳುಹಿಸಿದ್ದಾರೆ. ತುರ್ತು ಪರಿಸ್ಥಿತಿ ಅರ್ಥೈಸಿಕೊಂಡು ನಡೆಯಬಹುದಾಗಿದ್ದ ಸಂಭವನೀಯ ಅನಾಹುತವನ್ನು ತಪ್ಪಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ಹೆದ್ದಾರಿಯಲ್ಲಿ ಹರಡಿಕೊಂಡಿದ್ದ ಜಲ್ಲಿಯನ್ನು ತೆರವು ಮಾಡಿದ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



