LATEST NEWS
ಸುರತ್ಕಲ್ – ಮನೆ ಮಂದಿಯೊಂದಿಗೆ ಕುಳಿತು ಮಾತನಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಯುವಕ ಬಲಿ

ಸುರತ್ಕಲ್ ಜುಲೈ 19: ಊಟ ಮಾಡಿ ಮನೆ ಮಂದಿಯೊಂದಿಗೆ ಕುಳಿತು ಮಾತನಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಯುವಕನೊಬ್ಬ ಸಾವನಪ್ಪಿದ ಘಟನೆ ಕೃಷ್ಣಾಪುರ 6ಬ್ಲಾಕ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಮುಹಮ್ಮದ್ ಯೂನಸ್ ಎಂದು ತಿಳಿದು ಬಂದಿದೆ. ಗಲ್ಫ್ ನಲ್ಲಿ ಕೆಲಸದಲ್ಲಿದ್ದ ಯೂನಸ್ 15 ದಿನಗಳ ರಜೆ ಪಡೆದು ಊರಿಗೆ ಆಗಮಿಸಿದ್ದರು. ಶುಕ್ರವಾರ ರಾತ್ರಿ 11:30 ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮನೆ ಮಂದಿಯೊಂದಿಗೆ ಕುಳಿತು ಮಾತನಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.

ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೃತ ಮುಹಮ್ಮದ್ ಯೂನಸ್ ಅವರು ಪತ್ನಿ, ಒಂದು ವರ್ಷದ ಮಗು, ತಂದೆ, ತಾಯಿ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.