ಮಂಗಳೂರು ಜೂನ್ 30: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಆಸುಪಾಸಿನಲ್ಲಿ ಜೂನ್ 26 ಮತ್ತು ಜೂನ್ 27ರಂದು ಮುಂಜಾನೆ ಅವಧಿಯಲ್ಲಿ ಸರಣಿಯಾಗಿ ನಡೆದಿದ್ದ ಮಹಿಳೆಯರ ಚಿನ್ನದ ಸರ ಸುಲಿಗೆ ಪ್ರಕರಣಗಳನ್ನು ಭೇದಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತ್ಯ ಎಸಗಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ಕಳವಾಗಿದ್ದ ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಅಬ್ದುಲ್ ಜಾಫರ್ (28) ಬಂಧಿತ ಆರೋಪಿ. ಜೂನ್ 29ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಜಂಕ್ಷನ್ ಬಳಿ ಸುಲಿಗೆ ಮಾಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸುರತ್ಕಲ್ ಪೊಲೀಸರ ವಿಶೇಷ ತಂಡ ಈತನನ್ನು ಹೆಡೆಮುರಿ ಕಟ್ಟಿದೆ.
ಮೊದಲ ಪ್ರಕರಣ (ಜೂನ್ 26): ಚೊಕ್ಕಬೆಟ್ಟು ಅಜಾದ್ ನಗರದ 2ನೇ ಬ್ಲಾಕ್ನಲ್ಲಿ ಶ್ರೀಮತಿ ಜಾಹೀದ್ ಎಂಬವರು ಮನೆಯ ಬೆಡ್ ರೂಮ್ನಲ್ಲಿ ಮಲಗಿದ್ದಾಗ, ಕಿಟಿಕಿ ಮೂಲಕ ಕೈಹಾಕಿದ ಆರೋಪಿ ಜಾಫರ್, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಎಳೆದಿದ್ದ. ಈ ವೇಳೆ ಜಗ್ಗಾಟದಲ್ಲಿ ಸರ ತುಂಡಾಗಿದ್ದು, ರೂ. 20,000/- ಮೌಲ್ಯದ ಚಿನ್ನದ ಸರದ ಪೀಸ್ನೊಂದಿಗೆ ಕಳ್ಳ ಪರಾರಿಯಾಗಿದ್ದ.
ಎರಡನೇ ಪ್ರಕರಣ (ಜೂನ್ 27): ಇದರ ಮರುದಿನವೇ ಮುಂಜಾನೆ 5:00 ಗಂಟೆಗೆ ಚೊಕ್ಕಬೆಟ್ಟು 8ನೇ ಬ್ಲಾಕ್ನ ಫಯಾಜ್ ಎಂಬವರು ಮಸೀದಿಗೆ ಹೋದಾಗ ಬಾಗಿಲು ಮುಚ್ಚಿದ್ದನ್ನೇ ಬಂಡವಾಳವಾಗಿಸಿಕೊಂಡ ಆರೋಪಿ, ಒಳನುಗ್ಗಿ ಮಲಗಿದ್ದ ಶ್ರೀಮತಿ ಅಫ್ರೀನಾ ಅವರ ಕುತ್ತಿಗೆಯಿಂದ ರೂ. 1,00,000/- (ಒಂದು ಲಕ್ಷ) ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿ ಓಡಿಹೋಗಿದ್ದ.
ಬ್ಯಾಕ್-ಟು-ಬ್ಯಾಕ್ ನಡೆದ ಈ ಘಟನೆಗಳಿಂದ ಸಾರ್ವಜನಿಕರಲ್ಲಿ ಭೀತಿ ಎದುರಾಗಿತ್ತು. ತನಿಖೆ ಕೈಗೆತ್ತಿಕೊಂಡ ಸುರತ್ಕಲ್ ಪೊಲೀಸರು ಸಿಸಿಟಿವಿ ಹಾಗೂ ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಕೇವಲ 48 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ ಹಳೆಯ ಅಪರಾಧಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಸುರತ್ಕಲ್ ಠಾಣೆಯಲ್ಲಿ ಬಿಎನ್ಎಸ್ (BNS) ಅಡಿಯಲ್ಲಿ ತೀವ್ರ ಹಲ್ಲೆ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಅಡಿ ಕೊಲೆ ಬೆದರಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.