ಮಂಗಳೂರು ಮೇ 05: ಕುಳಾಯಿ ಹೊಸಬೆಟ್ಟುವಿನಲ್ಲಿ 2014ರಲ್ಲಿ ನಡೆದಿದ್ದ ಸುಮತಿ ಪ್ರಭು ಎಂಬವರ ಭೀಕರ ಕೊಲೆ ಮತ್ತು ದರೋಡೆ ಪ್ರಕರಣದ ತಲೆಮರೆಸಿಕೊಂಡಿರುವ ಎರಡನೇ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ಮೂಲದ ಬಹುದ್ದೂರ್ ಸಿಂಗ್ @ ಬುಯ್ಯ (45) ಬಂಧಿತ ಆರೋಪಿ.

2014ರ ಫೆಬ್ರುವರಿ 8ರಂದು ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿ ಸುಮತಿ ಪ್ರಭು ಅವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಅವರ ಮೈಮೇಲಿದ್ದ ಸುಮಾರು 3.80 ಲಕ್ಷ ರೂಪಾಯಿ ಮೌಲ್ಯದ 192 ಗ್ರಾಂ (24 ಪವನ್) ಬಂಗಾರದ ಒಡವೆಗಳನ್ನು ದೋಚಲಾಗಿತ್ತು. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಕೊಲೆ ಮತ್ತು ದರೋಡೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ರಾಜಸ್ಥಾನದ ಶಿವರಾಮ್, ಬಹುದ್ದೂರ್ ಸಿಂಗ್ ಮತ್ತು ಉತ್ತರ ಪ್ರದೇಶದ ಶಹನ್ವಾಜ್ ಎಂಬವರನ್ನು ದಸ್ತಗಿರಿ ಮಾಡಿದ್ದರು.
ಪ್ರಕರಣದ ವಿಚಾರಣೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆದರೆ, ಎರಡನೇ ಆರೋಪಿ ಬಹುದ್ದೂರ್ ಸಿಂಗ್ ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿತ್ತು. ರಾಜಸ್ಥಾನದ ತನ್ನ ಮೂಲ ವಿಳಾಸದಲ್ಲೂ ಈತ ಪತ್ತೆಯಾಗದ ಕಾರಣ ಪೊಲೀಸರಿಗೆ ಈತನ ಬಂಧನ ಸವಾಲಾಗಿ ಪರಿಣಮಿಸಿತ್ತು.
ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣೆಯ ಹೆಚ್.ಸಿ ಅಜಿತ್ ಮ್ಯಾಥ್ಯು, ಸಿಪಿಸಿ ಸುನೀಲ್ ಕುಸನಾಳ ಮತ್ತು ಮೋಹನ್ ಅವರನ್ನೊಳಗೊಂಡ ವಿಶೇಷ ತಂಡವನ್ನು ಆರೋಪಿಯ ಪತ್ತೆಗಾಗಿ ನೇಮಿಸಲಾಗಿತ್ತು. ತಾಂತ್ರಿಕ ಮಾಹಿತಿ ಮತ್ತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡವು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯಲ್ಲಿ ಅವಿತಿದ್ದ ಆರೋಪಿಯನ್ನು ಮೇ 3ರಂದು ಮಧ್ಯಾಹ್ನ ಬಂಧಿಸಿದೆ.
ಬಂಧಿತ ಆರೋಪಿಯನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಹೆಚ್.ಸಿ ರಾಜೇಂದ್ರ ಪ್ರಸಾದ್ ಮತ್ತು ಪಿಸಿ ಸತೀಶ್ ಸಹಕರಿಸಿದ್ದಾರೆ. ದೀರ್ಘಕಾಲದ ಬಳಿಕ ಕುಖ್ಯಾತ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.