LATEST NEWS
ಅನುಮತಿ ಇಲ್ಲದಿದ್ದರೂ ಯೂನಿಟಿ ಮಾರ್ಚ್; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸುಮೊಟೊ ದೂರು ದಾಖಲು
ಮಂಗಳೂರು ಫೆಬ್ರವರಿ 20: ಉಳ್ಳಾಲದಲ್ಲಿ ನಡೆದ ಪಿಎಫ್ಐ ಯೂನಿಟಿ ಮಾರ್ಚ್ ಸಮಾವೇಶದಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಅನೀಸ್ ಅಹ್ಮದ್ ನೀಡಿರುವ ಹೇಳಿಕೆಗೆ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಅನೀಸ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ಸಮಾವೇಶದ ಕುರಿತಂತೆ ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ನೀಡಿರುವುದು, ಪೊಲೀಸರ ಅನುಮತಿ ಪಡೆಯದೆ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ರೂಟ್ ಮಾರ್ಚ್ ನಡೆಸಿರುವುದು, ಸಾರ್ವಜನಿಕರಿಗೆ ಅಡ್ಡಿಯಾಗುವ ರೀತಿ ರಸ್ತೆ ಬಂದ್ ಮಾಡಿ ರೂಟ್ ಮಾರ್ಚ್ ನಡೆಸಿರುವ ಬಗ್ಗೆ ಪ್ರತ್ಯೇಕವಾಗಿ ಮೂರು ಎಫ್ಐಆರ್ ಗಳನ್ನು ದಾಖಲು ಮಾಡಲಾಗಿದೆ.
ಪ್ರಕರಣದಲ್ಲಿ ಪಿಎಫ್ಐ ಸ್ಥಾಪನಾ ದಿನಾಚರಣೆ ನೆಪದಲ್ಲಿ ಕಾರ್ಯಕ್ರಮ ನಡೆಸಿದ ಪ್ರಮುಖರಾದ ಮುನೀಬ್ ಬೆಂಗ್ರೆ, ಅಬ್ದುಲ್ ಖಾದರ್ ಕುಳಾಯಿ, ಶಹೀದ್ ದೇರಳಕಟ್ಟೆ, ಕಮಾಂಡರ್ ಸಫ್ವಾನ್, ಇಮ್ತಿಯಾಜ್ ಕೋಟೆಪುರ, ರಮೀಜ್ ಕೋಡಿ ಮತ್ತಿತರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ
ಅನೀಸ್ ಅಹ್ಮದ್ ಸಮಾವೇಶದಲ್ಲಿ ನೀಡಿರುವ ಹೇಳಿಕೆಯ ವಿಡಿಯೋದಲ್ಲಿ ರಾಮ ಮಂದಿರಕ್ಕಾಗಿ ಆರೆಸ್ಸೆಸ್ ಮಂದಿ ದೇಣಿಗೆ ಕೇಳಲು ಬಂದರೆ ಯಾರು ಕೂಡ ಒಂದು ರೂಪಾಯಿ ಹಣ ಕೊಡಬೇಡಿ. ಅದು ರಾಮ ಮಂದಿರವಲ್ಲ. ಅಲ್ಲಿ ಕಟ್ಟುತ್ತಿರುವುದು ಆರೆಸ್ಸೆಸ್ ಮಂದಿರ. ಮುಸ್ಲಿಮರ ಹಣದಲ್ಲಿ ಒಂದು ಕಲ್ಲು ಇಟ್ಟಿಗೆಯೂ ಮಂದಿರಕ್ಕೆ ಅಡಿಗಲ್ಲಾಗಬಾರದು. ಅಲ್ಲದೆ, ಆರೆಸ್ಸೆಸ್ ಮತ್ತು ಹಿಂದು ಧರ್ಮ ಒಂದೇ ಅಲ್ಲ. ಆರೆಸ್ಸೆಸ್ ಅಂದರೆ ಹಿಂದು ವಿರೋಧಿ. ಆರೆಸ್ಸೆಸ್ ಅನ್ನು ಸಂಪೂರ್ಣ ನಿರ್ಮೂಲನೆಗೆ ನಾವು ಗಲ್ಲಿ ಗಲ್ಲಿಗಳಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅನೀಸ್ ಅಹ್ಮದ್ ಹೇಳಿಕೆ ನೀಡಿದ್ದರು.