ಕಾರ್ಕಳ ಮಾರ್ಚ್ 31: ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಸಂಶಯಾಸ್ಪದವಾಗಿ ಮೃತಪಟ್ಟ ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ಶೆಟ್ಟಿ (30) ಅವರ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಸುದೀಪ್ ತಂದೆ ದಾಮೋದರ್ ಅವರು ಸೊಸೆ ಸೌಮ್ಯ ಶೆಟ್ಟಿ ವಿರುದ್ಧವೇ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗನ ಆತ್ಮಹತ್ಯೆಗೆ ಸೊಸೆಯೇ ಕಾರಣ ಎಂದು ಆರೋಪಿಸಿದ್ದಾರೆ.

ಫೆಬ್ರವರಿ 17 ರಂದು ಪುತ್ತೂರಿನಲ್ಲಿ ನೋಂದಣಿ ವಿವಾಹವಾಗಿದ್ದ ಈ ಜೋಡಿಯ ಸಂಸಾರದಲ್ಲಿ ಆರಂಭದಿಂದಲೇ ವಿರಸವಿತ್ತು ಎನ್ನಲಾಗಿದೆ. ಮಾರ್ಚ್ 17 ರಂದು ಸೌಮ್ಯ ಅವರು ನೆಲ್ಯಾಡಿಗೆ ಬಂದು ಸುದೀಪ್ಗೆ ಬೆದರಿಕೆ ಹಾಕಿದ್ದರು, ಇದರಿಂದ ಮನನೊಂದು ಮಾರ್ಚ್ 22 ರಂದು ಸುದೀಪ್ ವಿಷ ಸೇವಿಸಿದ್ದಾರೆ ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29 ರಂದು ಸುದೀಪ್ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಪತ್ನಿ ಸೌಮ್ಯ ಶೆಟ್ಟಿ, “ನಮ್ಮ ಮದುವೆಯನ್ನು ಸುದೀಪ್ ಮನೆಯವರು ಒಪ್ಪಿರಲಿಲ್ಲ. ಅಲ್ಲದೆ ಸುದೀಪ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲವಿತ್ತು. ಸಾಲಗಾರರು ಫೋನ್ ಮಾಡಿದಾಗ ಅವರ ತಂದೆಯೇ ನನ್ನ ನಂಬರ್ ನೀಡುತ್ತಿದ್ದರು. ಈ ಎಲ್ಲಾ ಮಾನಸಿಕ ಒತ್ತಡಗಳಿಂದ ಸುದೀಪ್ ಈ ನಿರ್ಧಾರ ಕೈಗೊಂಡಿರಬಹುದು” ಎಂದು ಹೇಳಿದ್ದಾರೆ. ತನಗೆ ಈ ಹಿಂದೆ ಒಂದು ಮದುವೆಯಾಗಿ ವಿಚ್ಛೇದನವಾಗಿದ್ದ ವಿಷಯ ಸುದೀಪ್ಗೆ ತಿಳಿದಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುದೀಪ್ ಸ್ವತಹ ಫೇಸ್ಬುಕ್ ಮೂಲಕ ನನ್ನನ್ನು ಅಪ್ರೋಚ್ ಆಗಿದ್ದರು. ಕಳೆದ ವರ್ಷ ಫೆಬ್ರವರಿಯಿಂದ ಮೆಸೇಜ್ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ನಾನು ಅವರಿಗೆ ವಾಪಸ್ ಮೆಸೇಜ್ ಮಾಡಿದ್ದೆ. ಬಳಿಕ ಅವರು ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದರು. ನನ್ನ ಮನೆಯವರಿಗೆ ಹೇಳಿ ಎಂದು ತಿಳಿಸಿದ್ದೆ. ಒಂದು ವರ್ಷದಿಂದ ನಿಮ್ಮ ಬಗ್ಗೆ ನೋಡಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಸುದೀಪ್ ಹೇಳಿದ್ದರು.ನಾನು ಸಹ ಮನೆಯವರು ಒಪ್ಪಿದರೆ ಮದುವೆಯಾಗುತ್ತೇನೆ ಎಂದು ಹೇಳಿದೆ. ಅವರು ಮನೆಯವರನ್ನು ಒಪ್ಪಿಸಿ ಮದುವೆಯ ತೀರ್ಮಾನಕ್ಕೆ ಬಂದರು. ನನ್ನ ತಮ್ಮನನ್ನು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ ಅವನ ಜೊತೆ ಮಾತನಾಡಿ ಮದುವೆ ತೀರ್ಮಾನಕ್ಕೆ ಬಂದರು.ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ: ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಆಟೋ ಚಾಲಕ- Video ವೈರಲ್
ನನ್ನ ಹಿಂದಿನ ಜೀವನದ ಬಗ್ಗೆ ಎಲ್ಲಾ ವಿಚಾರ ಅವರಿಗೆ ತಿಳಿಸಿದೆ. ಆ ಬಗ್ಗೆ ಏನು ತಲೆಕೆಡಿಸಿಕೊಂಡಿರಲಿಲ್ಲ. ಮದುವೆ ನೋಂದಣಿಯಾದ ನಂತರ ನನ್ನ ಮನೆಯಲ್ಲಿ ಎಲ್ಲರ ಜೊತೆ ಸಂತೋಷವಾಗಿದ್ದರು. ಈಗ ಆತ್ಮಹತ್ಯೆ ಯಾಕೆ ಮಾಡಿಕೊಂಡರು ಗೊತ್ತಿಲ್ಲ. ನಮ್ಮ ಮದುವೆಗೆ ಅವರ ಮನೆಯವರು ಒಪ್ಪದೇ ಇರುವ ಕಾರಣ ಇರಬಹುದು. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿ. ನಾನು ಕೂಡ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಯೇ ಸಾವಿನ ನಿಖರ ಕಾರಣವನ್ನು ಬಹಿರಂಗಪಡಿಸಬೇಕಿದೆ.