ಮಂಗಳೂರು ಮೇ 06: ‘ಸು ಫ್ರಮ್ ಸೋ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ನಟ ಮತ್ತು ನಿರ್ದೇಶಕ ಜೆ.ಪಿ. ತುಮಿನಾಡು ಅವರು ರಶ್ಮಿಕಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪ್ರತಿಭೆಯಾದ ಜಯಪ್ರಕಾಶ್ (ಜೆ.ಪಿ.) ತುಮಿನಾಡು ಅವರು ಚಿತ್ರರಂಗಕ್ಕೆ ಬರುವ ಮೊದಲು ದಶಕಕ್ಕೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ನಾಟಕಗಳ ರಚನೆ ಮತ್ತು ನಿರ್ದೇಶನದಲ್ಲಿ ಹೆಸರು ಮಾಡಿದ್ದ ಇವರು, ಆರಂಭಿಕ ದಿನಗಳಲ್ಲಿ ಪೈಂಟರ್ ಆಗಿಯೂ ಕೆಲಸ ಮಾಡಿದ್ದರು. 2025ರಲ್ಲಿ ಅತಿ ಕಡಿಮೆ ಬಜೆಟ್ನಲ್ಲಿ ಬಿಡುಗಡೆಯಾದ ಇವರ ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರವು ಕಥೆಯೇ ಸಿನಿಮಾದ ನಿಜವಾದ ಹೀರೋ ಎಂಬುದನ್ನು ಸಾಬೀತುಪಡಿಸಿ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತ್ತು.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ