Connect with us

    BANTWAL

    ಕಾಲು ಬೆರಳುಗಳಿಂದಲೇ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ವಿಧ್ಯಾರ್ಥಿ….!!

    ಬಂಟ್ವಾಳ ಜೂನ್ 26: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗಲ್ಲ ಎನ್ನುವ ಮಾತು ಕೇಳಿದ್ದೇವೆ. ಕೆಲವು ವಿಭಿನ್ನ ವ್ಯಕ್ತಿಗಳ ಸಾಹಸವನ್ನೂ ಕೇಳಿದ್ದೇವೆ. ಅಂಥ ವಿಭಿನ್ನ ವ್ಯಕ್ತಿತ್ವಗಳ ಸಾಲಿನಲ್ಲಿ ಇಲ್ಲೊಬ್ಬ ಪುಟ್ಟ ಪೋರ ಎದ್ದು ಬಂದಿದ್ದಾನೆ.

    ಹೌದು..‌ ಹುಟ್ಟಿನಿಂದಲೇ ಕೈಗಳೇ ಇಲ್ಲದ ಪೋರನೊಬ್ಬ ಕಾಲಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವುದು ಈಗ ರಾಜ್ಯದ ಗಮನ ಸೆಳೆದಿದೆ. ಇದಕ್ಕೆ ಕಾರಣವಾಗಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಡಿದ ಒಂದು ಟ್ವೀಟ್. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೌಶಿಕ್ ಎನ್ನುವ ಹುಡುಗ ನೆಲದಲ್ಲಿ ಕುಳಿತು ಕಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ಚಿತ್ರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿದ್ದಾರೆ. ಇಂಥವರು ಬದುಕಿನ ಸಾರ್ಥಕತೆಯನ್ನು ಬಿಂಬಿಸುತ್ತಾರೆ. ಸಮಾಜದಲ್ಲಿ ಆತ್ಮವಿಶ್ವಾಸದ ಬದುಕನ್ನು ಸಮರ್ಥಿಸುತ್ತಾರೆ ಎಂದು ಸಚಿವರು ಅಭಿಮಾನ ವ್ಯಕ್ತಪಡಿಸಿದ್ದಾರೆ.

    ವಿಶೇಷ ಅಂದ್ರೆ ಬಂಟ್ವಾಳ ಪೇಟೆಯ ರಾಜೇಶ್ ಆಚಾರ್ಯ- ಜಲಜಾಕ್ಷಿ ಎಂಬ ಬಡ ದಂಪತಿಯ ಪುತ್ರನಾಗಿರುವ ಕೌಶಿಕ್, ಹುಟ್ಟಿನಿಂದಲೇ ಅಂಗವಿಕಲ. ಹಾಗಂತ, ತನ್ನ ವೈಕಲ್ಯದಿಂದ ಆತ ಹೆತ್ತವರಿಗೆ ಹೊರೆಯಾಗಿಲ್ಲ. ತನ್ನ ವೈಕಲ್ಯವನ್ನೆ ಮೆಟ್ಟಿ ನಿಂತು ಹೆತ್ತವರೇ ಬೆರಗಾಗುವ ರೀತಿ ಸಾಧನೆ ಮೆರೆದಿದ್ದಾನೆ. ಕೈ ಇಲ್ಲ ಎಂದು ನೊಂದುಕೊಳ್ಳುವ ಬದಲು ಕೈಗಳಿದ್ದವರೇ ನಾಚುವ ರೀತಿ ಪ್ರತಿಭೆ ತೋರಿದ್ದಾನೆ. ಶಾಲೆಗಳಲ್ಲಿ ಡ್ಯಾನ್ಸ್ , ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಾಧನೆ ಮೆರೆದಿದ್ದಾನೆ.
    ಕೈಯ ಬದಲು ಕಾಲು ಇದೆಯಲ್ಲ, ತನಗೆ ಕಾಲೇ ಎಲ್ಲವೂ ಅನ್ನುವ ರೀತಿ ಕಾಲ್ಚಳಕ ತೋರಿದ್ದಾನೆ. ಕ್ರಿಕೆಟ್ ಆಟದಲ್ಲಿ ಕೈಯಲ್ಲಿಯೇ ಬೌಲ್ ಮಾಡುವುದು ಬೆರಗು ಹುಟ್ಟಿಸುತ್ತದೆ. ಬ್ಯಾಟ್ಸ್ ಮನ್ ಹೊಡೆದ ಚೆಂಡನ್ನು ಕಾಲಿನಲ್ಲೇ ಹಿಡಿಯುವುದು ಕೈಗಳಿರುವ ಯುವಕರನ್ನೇ ನಾಚಿಸುತ್ತೆ.. ಕೈ ಇಲ್ಲದಿದ್ದರೂ, ಮನೆ ಎದುರಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಈಜಾಡಿ ಸಾಹಸ ತೋರುತ್ತಾನೆ..

    ಕಾಲಿನಲ್ಲಿ ನೃತ್ಯ ಮಾಡುತ್ತಲೇ ಬಾಯಲ್ಲಿ ಚಾಲಾಕಿ ತೋರುವ ಈತನ ಡ್ಯಾನ್ಸ್ ಕಂಡರೆ ಹುಡುಗನಿಗೆ ವೈಕಲ್ಯ ಇದೆಯೆಂದು ಅನಿಸುವುದೇ ಇಲ್ಲ.  ಈ ಬಾರಿ ಕೊರೊನಾ ಸಂಕಷ್ಟದ ಮಧ್ಯೆ ವಿದ್ಯಾರ್ಥಿಗಳೆಲ್ಲ ಆತಂಕದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದರೆ, ಯಾರದೇ ಸಹಾಯ ಪಡೆಯದೆ ನೆಲದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿರುವ ಈ ಪೋರ ಕೌಶಿಕನದ್ದು ಅಗಣಿತ ಆತ್ಮವಿಶ್ವಾಸ. ಅಪ್ರತಿಮ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ..

    Share Information
    Advertisement
    Click to comment

    You must be logged in to post a comment Login

    Leave a Reply