ಉಜ್ಜಯಿನಿ, ಮಾರ್ಚ್ 22: ಶಿಸ್ತಿನ ಹೆಸರಿನಲ್ಲಿ ಹಾಸ್ಟೆಲ್ ವಾರ್ಡನ್ ಒಬ್ಬರು ವಿದ್ಯಾರ್ಥಿಯ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವರದಿಯಾಗಿದೆ. ಇಲ್ಲಿನ ಪ್ರತಿಷ್ಠಿತ ‘ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ’ದ ಹಾಸ್ಟೆಲ್ನಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಾಸ್ಟೆಲ್ನಲ್ಲಿ ವಾಸವಿದ್ದ ವಿದ್ಯಾರ್ಥಿಯೊಬ್ಬ ತನ್ನ ಹಾಸಿಗೆಯ ಬದಲಿಗೆ ಸಹಪಾಠಿಯೊಬ್ಬನ ಹಾಸಿಗೆಯ ಮೇಲೆ ಮಲಗಿದ್ದ ಎನ್ನಲಾಗಿದೆ. ಈ ಸಣ್ಣ ತಪ್ಪನ್ನೇ ನೆಪವಾಗಿಟ್ಟುಕೊಂಡ ವಾರ್ಡನ್, ವಿದ್ಯಾರ್ಥಿಯನ್ನು ಕೋಲಿನಿಂದ ನಿರ್ದಯವಾಗಿ ಥಳಿಸಿದ್ದಾರೆ. ಕೇವಲ ಹಾಸಿಗೆ ಬದಲಿಸಿದ ಕಾರಣಕ್ಕೆ ಮಗುವಿನ ಮೇಲೆ ಈ ಮಟ್ಟದ ದೈಹಿಕ ದೌರ್ಜನ್ಯ ಎಸಗಿರುವುದು ಶಿಕ್ಷಣ ಸಂಸ್ಥೆಯ ಘನತೆಗೆ ತಕ್ಕುದಲ್ಲ ಎಂಬ ಟೀಕೆಗಳು ಕೇಳಿಬಂದಿವೆ.
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ನೆಟ್ಟಿಗರು ವಾರ್ಡನ್ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. “ವಿದ್ಯಾರ್ಥಿ ತಪ್ಪು ಮಾಡಿದ್ದರೆ ಅದನ್ನು ಪ್ರೀತಿಯಿಂದ ತಿಳಿಹೇಳಬಹುದಿತ್ತು. ಅಥವಾ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಬಹುದಿತ್ತು. ಅದನ್ನು ಬಿಟ್ಟು ಈ ರೀತಿ ಮೃಗೀಯವಾಗಿ ವರ್ತಿಸುವ ಅಗತ್ಯವಿರಲಿಲ್ಲ” ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ವೇದ ಮತ್ತು ಸಂಸ್ಕೃತಿಯನ್ನು ಬೋಧಿಸುವ ಇಂತಹ ಪವಿತ್ರ ಕೇಂದ್ರದಲ್ಲೇ ಇಂತಹ ಹಿಂಸಾತ್ಮಕ ಘಟನೆ ನಡೆದಿರುವುದು ವಿಷಾದನೀಯ. ಘಟನೆಗೆ ಸಂಬAಧಿಸಿದAತೆ ಆಡಳಿತ ಮಂಡಳಿಯು ಕೂಡಲೇ ಮಧ್ಯಪ್ರವೇಶಿಸಿ, ಹಲ್ಲೆ ನಡೆಸಿದ ವಾರ್ಡನ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು ಎಂದು ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.