ಹೊಸದಿಲ್ಲಿ ಫೆಬ್ರವರಿ 03: ಟ್ರಂಪ್ ಅಮೇರಿಕಾದ ಅಧ್ಯಕ್ಷರಾದ ಬಳಿಕ ಭಾರತೀಯ ಷೇರು ಮಾರುಕಟ್ಟೆ ಏರಿಳಿಕೆ ಹಾದಿಯಲ್ಲೇ ಮುಂದುವರೆದಿತ್ತು. ಅದರ ನಡುವೆ ಏಕಾಏಕಿ ಸುಂಕ ಏರಿಕೆ ಮಾಡಿ ಟ್ರಂಪ್ ಭಾರತದ ಮೇಲೆ ಪ್ರಹಾರಕ್ಕೆ ಮುಂದಾಗಿದ್ದರು. ಇದೀಗ ಅಮೆರಿಕವು ಭಾರತದ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಿದೆ. ಈ ಬೆಳವಣಿಗೆ ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಚೈತನ್ಯವನ್ನು ನೀಡಿದ್ದು, ಬಿಎಸ್‌ಇ ದಿನದ ವಹಿವಾಟನ್ನು ಧನಾತ್ಮಕವಾಗಿ ಆರಂಭಿಸಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಯ ಘೋಷಣೆ ಹೋರಬೀಳುತ್ತಿದ್ದಂತೇ, ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಬಂಪರ್ ಏರಿಕೆ ಕಂಡಿದೆ.
ಸೆನ್ಸೆಕ್ಸ್ ಪ್ರಿ ಓಪನ್‌ನಲ್ಲಿ ಬರೋಬ್ಬರಿ 3,600 ಪಾಯಿಂಟ್ಸ್ ಹೆಚ್ಚಾಗಿದ್ದರೆ, ನಿಫ್ಟಿ50 ಸೂಚ್ಯಂಕವು 1200ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆಗೊಂಡಿದೆ. ಇದು ಹೂಡಿಕೆದಾರರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದು, ದಿನದ ವಹಿವಾಟು ಉತ್ತಮವಾಗಿ ನಡೆಯುತ್ತಿದೆ.
ಮುಂಬೈ ಷೇರು ಮಾರುಕಟ್ಟೆಯ ಇಂದಿನ ವಹಿವಾಟಿನಲ್ಲಿ ಬಹುತೇಕ ಎಲ್ಲಾ ವಲಯವು ಹಸಿರು ಬಣ್ಣದಲ್ಲಿ ತೆರೆದುಕೊಂಡಿದೆ. ಇದು ಷೇರು ಮೌಲ್ಯದ ಏರಿಕೆಯ ಸಂಕೇತವಾಗಿದ್ದು, ಹೂಡಿಕೆದಾರರು ಸಂತುಷ್ಟರಾಗಿದ್ದಾರೆ. ಕೇಂದ್ರ ಬಜೆಟ್ ಬಳಿಕ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು. ಆದರೀಗ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಬಿಎಸ್‌ಇ ವಹಿವಾಟಿಗೆ ಹೊಸ ಚೈತನ್ಯವನ್ನು ತುಂಬಿದೆ.



