ಕದ್ರಿ ಗೋಪಾಲನಾಥ್ ಅವರ ಪುತ್ಥಳಿ ನಿರ್ಮಾಣಕ್ಕೆ ಚಿಂತನೆ – ಶಾಸಕ ಕಾಮತ್

ಮಂಗಳೂರು ಅಕ್ಟೋಬರ್ 14: ಸಾಕ್ಸಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಮರಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಸಂತಾಪ ಸೂಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಸಾಧನೆಗೈದ ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ನಮಗೆ ತುಂಬಲಾರದ ನಷ್ಟವೇ ಸರಿ. ಸಾಧಿಸುವುದಕ್ಕೆ ಹೊರಟವನಿಗೆ ಸಾಧಕನೇ ಸ್ಪೂರ್ತಿ ಎಂಬಂತೆ ಅನೇಕರಿಗೆ ಪ್ರೇರಣೆಯಾಗಿ ನಿಲ್ಲುವವರು ನಮ್ಮ ಕದ್ರಿ ಗೋಪಾಲನಾಥರು.

ಅವರ ಸಾಧನೆ,ಪರಿಶ್ರಮಕ್ಕೆ ಬೆಲೆಕಟ್ಟಲಾಗದು.ಆದರೆ ಅವರ ಸಾಧನೆಯನ್ನು ಮುಂದಿನ ಪೀಳಿಗೆ ನೆನಪಿಡುವಂತೆ ಮಾಡುವ ಉದ್ದೇಶದಿಂದ ಮಂಗಳೂರಿನ ಯಾವುದಾದರೂ ಒಂದು ಭಾಗದಲ್ಲಿ ಕದ್ರಿ ಗೋಪಾಲನಾಥ್ ಅವರ ಪುತ್ಥಳಿ ನಿರ್ಮಿಸುವ ಚಿಂತನೆಯಿದೆ. ಆ ಮೂಲಕ ಅವರ ಸಾಧನೆ ಮುಂದಿನ ಸಾಧಕರಿಗೆ ಸ್ಪೂರ್ತಿ ತುಂಬಲಿ ಎನ್ನುವ ಉದ್ಧೇಶವಷ್ಟೇ ಎಂದರು. ಕರಾವಳಿಯಲ್ಲಿ ಜನಿಸಿದ ಅನೇಕ ಸಾಧಕರು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಸಮಾಜದ ಮುಂದಿನ ಪೀಳಿಗೆಗೆ ಆದರ್ಶವಾಗುವಂತೆ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ ಎಂದರು.

ಕದ್ರಿ ಗೋಪಾಲನಾಥರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ವರ್ಗಕ್ಕೆ ಭಗವಂತನು ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದಿದ್ದಾರೆ.