ಬೆಂಗಳೂರು,ಮಾರ್ಚ್ 30: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸಾರಿಗೆ ಇಲಾಖೆ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಬರುವ ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ, ದೇಶಾದ್ಯಂತದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ರೂಪದ ಹಣ ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇನ್ಮುಂದೆ ಪ್ರತಿ ವಾಹನಕ್ಕೂ ‘ಫಾಸ್ಟ್ಟ್ಯಾಗ್’ (FASTag) ಕಡ್ಡಾಯವಾಗಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯಿಲ್ಲದ ವಾಹನಗಳಿಗೆ ಟೋಲ್ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ.

ಟೋಲ್ ಕೇಂದ್ರಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪಾರದರ್ಶಕತೆಯನ್ನು ತರಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ನಗದು ಪಾವತಿಗಾಗಿ ಮೀಸಲಿಡಲಾಗಿದ್ದ ‘ಹೈಬ್ರಿಡ್ ಲೇನ್’ಗಳನ್ನು ಸಹ ಈಗ ಫಾಸ್ಟ್ಟ್ಯಾಗ್ ಲೇನ್ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಏಪ್ರಿಲ್ 1ರ ನಂತರ ಯಾವುದೇ ಕಾರಣಕ್ಕೂ ನಗದು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಸಕ್ರಿಯ ಫಾಸ್ಟ್ಟ್ಯಾಗ್ ಹೊಂದಿರದ ಅಥವಾ ಬ್ಲಾಕ್ಲಿಸ್ಟ್ ಆಗಿರುವ ಟ್ಯಾಗ್ ಹೊಂದಿರುವ ವಾಹನಗಳು ಟೋಲ್ ಲೇನ್ಗೆ ಪ್ರವೇಶಿಸಿದರೆ, ಅಂತಹ ವಾಹನಗಳಿಗೆ ನಿಗದಿತ ಟೋಲ್ ದರದ ಎರಡು ಪಟ್ಟು (Double Fine) ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತದೆ. ಈ ಮೂಲಕ ಪ್ರತಿಯೊಬ್ಬರೂ ಡಿಜಿಟಲ್ ಪಾವತಿ ವ್ಯಾಪ್ತಿಗೆ ಬರುವಂತೆ ಪ್ರೇರೇಪಿಸಲಾಗುತ್ತಿದೆ.
ಹೊಸ ಹಣಕಾಸು ವರ್ಷದ ಹಿನ್ನೆಲೆಯಲ್ಲಿ ಟೋಲ್ ದರಗಳಲ್ಲಿ ಶೇ. 3 ರಿಂದ 5 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದರೊಂದಿಗೆ, ‘ಒಂದು ವಾಹನ – ಒಂದು ಫಾಸ್ಟ್ಟ್ಯಾಗ್’ ನಿಯಮವನ್ನು ಜಾರಿಗೊಳಿಸಲಾಗಿದ್ದು, ಸವಾರರು ತಮ್ಮ ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಅಪೂರ್ಣ ದಾಖಲೆ ಹೊಂದಿರುವ ಟ್ಯಾಗ್ಗಳನ್ನು ಬ್ಯಾಂಕುಗಳು ಏಪ್ರಿಲ್ 1ರಿಂದ ನಿಷ್ಕ್ರಿಯಗೊಳಿಸಲಿವೆ.
ಈ ಹೊಸ ವ್ಯವಸ್ಥೆಯಿಂದಾಗಿ ಟೋಲ್ ಬಳಿ ವಾಹನಗಳು ಕಾಯುವ ಸಮಯ ಗಣನೀಯವಾಗಿ ಕಡಿಮೆಯಾಗಲಿದ್ದು, ಇಂಧನ ಉಳಿತಾಯಕ್ಕೂ ಸಹಕಾರಿಯಾಗಲಿದೆ. ಸವಾರರು ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ಕೂಡಲೇ ತಮ್ಮ ಫಾಸ್ಟ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಲು ಮತ್ತು ಕೆವೈಸಿ ನವೀಕರಿಸಲು ಸೂಚಿಸಲಾಗಿದೆ.