ಆಂಧ್ರಪ್ರದೇಶ ಎಪ್ರಿಲ್ 15: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಟಾಲಿವುಡ್ ನಟರ ಬಗ್ಗೆ ಕಾಮೆಂಟ್ ಮಾಡಿದ್ದಕ್ಕಾಗಿ ಎಫ್ಐಆರ್ ದಾಖಲಾದ ನಂತರ ಆಂಧ್ರಪ್ರದೇಶ ಪೊಲೀಸರು ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಸ್ಟ್ಯಾಂಡ್-ಅಪ್ ಹಾಸ್ಯನಟ ಅನುದೀಪ್ ಕಟ್ಟಿಕಲಾನನ್ನು ಬಂಧಿಸಿದ್ದಾರೆ.

‘ಸಿಲ್ಲಿ ಸೌತ್ ಕಾಮಿಡಿ’ ಎಂಬ ಯುಟ್ಯೂಬ್ ಚಾನೆಲ್ ನಡೆಸುತ್ತಿರುವ ಐಐಟಿ ಬಾಂಬೆ ಪದವೀಧರ ಅನುದೀಪ್ ಕಟಿಕಲಾ, ಇತ್ತೀಚೆಗೆ ಆಯೋಜಿಸಿದ್ದ ಕಾಮಿಡಿ ಶೋವೊಂದರಲ್ಲಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಮತ್ತು ಅವರ ಸೋದರಸೊಸೆ ನಿಹಾರಿಕಾ ಕೊನಿಡೇಲ ಅವರ ವಿಚ್ಛೇದನದ ಕುರಿತು ಹಾಸ್ಯ ಮಾಡಿದ್ದರು. ಈ ಪ್ರದರ್ಶನದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಜನಸೇನಾ ಪಕ್ಷದ ಪದಾಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಅನುದೀಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕ್ರಿಮಿನಲ್ ಮಾನಹಾನಿ (ಸೆಕ್ಷನ್ 356), ಮಹಿಳೆಯ ಘನತೆಗೆ ಧಕ್ಕೆ ತರುವ ವರ್ತನೆ (ಸೆಕ್ಷನ್ 79) ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಮೊದಲೇ ಅನುದೀಪ್ ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದರೂ, ಕಾನೂನು ಪ್ರಕ್ರಿಯೆ ಮುಂದುವರಿದಿದೆ.