ಶಿವಮೊಗ್ಗ,ಏಪ್ರಿಲ್ 01: ನಗರದ ಊರಗಡೂರಿನಲ್ಲಿ ಕಿಡಿಗೇಡಿಗಳು ತಮ್ಮ ವಿಕೃತಿ ಮೆರೆದಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅನ್ಯಕೋಮಿನ ಅಪ್ರಾಪ್ತರಿಂದ ಹತ್ಯೆಗೀಡಾಗಿದ್ದ 10ನೇ ತರಗತಿ ವಿದ್ಯಾರ್ಥಿ ಸಂಕೇತ್ನ ಸಮಾಧಿಯನ್ನು ಧ್ವಂಸಗೊಳಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ.

ಕಳೆದ ಫೆಬ್ರವರಿ 24 ರಂದು ಊರಗಡೂರಿನಲ್ಲಿ ನಡೆದಿದ್ದ ಗಲಾಟೆಯೊಂದನ್ನು ಬಿಡಿಸಲು ಹೋದ ಸಂದರ್ಭದಲ್ಲಿ ಸಂಕೇತ್ನ ಮೇಲೆ ಅನ್ಯಕೋಮಿನ ಅಪ್ರಾಪ್ತ ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಸಂಕೇತ್ ಮೃತಪಟ್ಟಿದ್ದನು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರುಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಮೃತ ಬಾಲಕ ಸಂಕೇತ್ನ ಅಂತ್ಯಕ್ರಿಯೆಯನ್ನು ಊರಗಡೂರಿನ ಗುಡ್ಡೆಮರಡಿ ಮಲ್ಲೇಶ್ವರ ದೇವಸ್ಥಾನದ ಸಮೀಪವಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗಿತ್ತು. ಮಗನ ನೆನಪಿಗಾಗಿ ಪೋಷಕರು ಸಮಾಧಿಗೆ ಕಟ್ಟೆ ನಿರ್ಮಿಸಿ, ಗ್ರಾನೈಟ್ ಅಳವಡಿಸಿ ಭಾವಚಿತ್ರವನ್ನು ಹಾಕಿದ್ದರು. ಆದರೆ, ಈಗ ಕಿಡಿಗೇಡಿಗಳು ಸಮಾಧಿಯ ಒಂದು ಭಾಗವನ್ನು ಒಡೆದು ಹಾಕಿದ್ದಾರೆ. ಸಮಾಧಿಯ ಮೇಲಿದ್ದ ಗ್ರಾನೈಟ್ ಕಲ್ಲುಗಳನ್ನು ಧ್ವಂಸಗೊಳಿಸಿರುವುದಲ್ಲದೆ, ಅಲ್ಲಿ ಅಳವಡಿಸಲಾಗಿದ್ದ ಬಾಲಕನ ಫೋಟೋವನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಲಾಗಿದೆ.
ಘಟನೆಯಿಂದ ತೀವ್ರವಾಗಿ ನೊಂದಿರುವ ಸಂಕೇತ್ನ ತಂದೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, “ಮಗನ ಸಾವಿನ ನಂತರ ನಮ್ಮ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಈಗ ಕಿಡಿಗೇಡಿಗಳು ಅವನ ಸಮಾಧಿಯನ್ನೂ ಬಿಡದೆ ಹಾನಿ ಮಾಡಿರುವುದು ನಮಗೆ ಮತ್ತಷ್ಟು ಆಘಾತ ತಂದಿದೆ. ತಪ್ಪಿತಸ್ಥರನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷಿಸಬೇಕು,” ಎಂದು ಕಣ್ಣೀರಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರು ನೀಡಿದ ದೂರಿನನ್ವಯ ತನಿಖೆ ಆರಂಭವಾಗಿದ್ದು ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.