ಪಲಿಮಾರು ಮಠದ 31 ನೇ ಯತಿಯಾಗಿ ಶೈಲೇಶ್ ಉಪಾಧ್ಯಾಯ ಆಯ್ಕೆ

ಉಡುಪಿ ಮಾರ್ಚ್ 27: ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದು. ಪಲಿಮಾರು ಮೂಲ ಮಠದಲ್ಲಿರುವ ಯೋಗ ದೀಪಿಕಾ ಗುರುಕುಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರು ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಲಿದ್ದಾರೆ.

ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಪಲಿಮಾರು ಮಠದ ಹಿರಿಯ ಸ್ವಾಮಿಜಿ ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದಾರೆ.ಶಿಬರೂರಿನಲ್ಲಿ 1956ರಲ್ಲಿ ಜನಿಸಿದ ಪಲಿಮಾರು ಸ್ವಾಮೀಜಿಯವರಿಗೆ ಪ್ರಸಕ್ತ 63 ವರ್ಷವಾಗಿದ್ದು, ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಶಿಷ್ಯ ಸ್ವೀಕಾರ ಮಾಡುತ್ತಿದ್ದಾರೆ. 1974ರಲ್ಲಿ ವಿದ್ಯಾಮಾನ್ಯ ತೀರ್ಥರ ಉತ್ತರಾಧಿಕಾರಿಯಾಗಿ ಸನ್ಯಾಸ ಸ್ವೀಕರಿಸಿದ ಶ್ರೀ ವಿದ್ಯಾಧೀಶ ಸ್ವಾಮೀಜಿಯವರು ಅನೇಕ ಜನಪರ ಯೋಜನೆಗಳ ಮೂಲಕ ಹೆಸರು ಮಾಡಿದ್ದಾರೆ.

ಪಲಿಮಾರು ಮೂಲಮಠದ ಗುರುಕುಲದಲ್ಲಿ ಕಳೆದ ಮೂರು ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವ ಶೈಲೇಶ್ ಆಚಾರ್ಯ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಮೇ ತಿಂಗಳ 9 ರಿಂದ 12 ರ ವರೆಗೆ ಸನ್ಯಾಸ ಸ್ವೀಕಾರ ಮತ್ತು ಪೀಠಾರೋಹಣ ನಡೆಯಲಿದೆ.

ಶೈಲೇಶ್ ಉಪಾಧ್ಯಾಯರ ಮನೆಯವರು ಅನೇಕ ವರ್ಷಗಳಿಂದ ಹಲವು ದೇವಸ್ಥಾನಗಳಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶೈಲೇಶ್ ಉಪಾಧ್ಯಾಯ ಸುರೇಂದ್ರ ಉಪಾಧ್ಯಾಯ ಮತ್ತು ಲಕ್ಷ್ಮೀ ದಂಪತಿಗಳ ಪುತ್ರ. ಶಿಷ್ಯನ ಹುಡುಕಾಟದಲ್ಲಿದ್ದ ಫಲಿಮಾರು ಶ್ರೀಗಳಿಗೆ ಶೈಲೇಶ್ ಉಪಾಧ್ಯಾಯ ಸರಿಯಾದ ಆಯ್ಕೆ ಎಂಬ ತೀರ್ಮಾನಕ್ಕೆ ಬಂದರು. ಬಳಿಕ 3 ಜ್ಯೋತಿಷ್ಯರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರ ಕೈಗೊಂಡರು. ತಮ್ಮ ಮಗನನ್ನು ಸನ್ಯಾಸಿಯಾಗಲು ಒಪ್ಪಿಗೆ ಸೂಚಿಸಿದ ಶೈಲೇಶ್ ಉಪಾಧ್ಯಾಯರ ತ್ಯಾಗ ದೇಶಕ್ಕೆ ಸೇರಿದ ಸೈನಿಕನ ತ್ಯಾಗದಂತೆ ದೊಡ್ಡದು. ಎಂದು ಫಲಿಮಾರು ಶ್ರೀ ಹೇಳಿದರು.

ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಶೈಲೇಶ್ ಉಪಾಧ್ಯಾಯ ಎಸ್ ಎಸ್ ಎಲ್ ಸಿ ವರೆಗೆ ಓದಿದ್ದಾರೆ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯೋದಯ ಶಾಲೆಯಲ್ಲಿ ಪೂರ್ಣಗೊಳಿಸಿ ಪ್ರೌಢ ಶಿಕ್ಷಣವನ್ನು ಸಂಸ್ಕೃತ ವಿದ್ಯಾಲಯದಲ್ಲಿ ನಡೆಸಿದ್ದಾರೆ.

ಆಧ್ಯಾತ್ಮದತ್ತ ಒಲವು ಹೊಂದಿದ ಶೈಲೇಶ್ ಕಳೆದ ಮೂರು ವರ್ಷಗಳಿಂದ ಫಲಿಮಾರು ಮೂಲಮಠದಲ್ಲಿ ವ್ಯಾಕರಣ ವೇದ ಶಾಸ್ತ್ರಗಳ ಅಧ್ಯಯನ ಮಾಡುತ್ತಿದ್ದಾರೆ. ಶೈಲೇಶ್ ಸಹೋದರ ಆಯುರ್ವೇದ ವಿಭಾಗದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

ಸ್ವಾಮೀಜಿ ಶಿಷ್ಯನ ಆಯ್ಕೆ ಮಾಡುತ್ತಿರುವುದರಿಂದ ತನ್ನನ್ನು ಶಿಷ್ಯನಾಗಿ ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಭಗವತ್ ಸಂಕಲ್ಪ ಮತ್ತು ಯೋಗ ಸೇರಿ ಶೈಲೇಶ್ ಜಾತಕವೂ ಕೂಡಿ ಬಂದುದರಿಂದ ಫಲಿಮಾರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದರು.

ಸನ್ಯಾಸ ಸ್ವೀಕಾರದ ಬಳಿಕ ಮದ್ವ ಪೀಠದಲ್ಲಿ ಅವರ ವ್ಯಾಸಂಗ ಮುಂದುವರಿಯಲಿದೆ. ಚಿಣ್ಣರ ಸಂತರ್ಪಣೆಯಂತಹ ಸಮಾಜಮುಖಿ ಕಾರ್ಯಗಳಿಂದ ಖ್ಯಾತವಾದ ಪಲಿಮಾರು ಮಠದ 31 ನೇ ಯತಿಯಾಗಿ ಶೈಲೇಶ್ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.