LATEST NEWS
ಕಾರು ಚಾಲಕನ ಅತಿವೇಗಕ್ಕೆ ಬಲಿಯಾದ ಆಟೋ ರಿಕ್ಷಾ ಚಾಲಕ
ಮಂಗಳೂರು ಮಾರ್ಚ್ 27: ಕಾರು ಚಾಲಕನ ಅತೀ ವೇಗಕ್ಕೆ ರಿಕ್ಷಾ ಚಾಲಕನೊಬ್ಬ ತನ್ನ ಪ್ರಾಣ ಕಳೆದುಕೊಂಡ ಘಟನೆ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ನಡೆದಿದೆ.
ಮೃತ ರಿಕ್ಷಾ ಚಾಲಕನನ್ನು ಪಜೀರು ಸೇನೆರೆಬೈಲು ಸಂಜೀವ ಪೂಜಾರಿ ಎಂಬವರ ಪುತ್ರ ಶ್ಯಾಮಪ್ರಸಾದ್ (45) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಮನೆ ಸಮೀಪದ ಬಾಡಿಗೆ ಇತ್ತೆಂದು ಮನೆಯಲ್ಲಿ ತಿಳಿಸಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ಸಂದರ್ಭ ಕಾರು ಢಿಕ್ಕಿ ಹೊಡೆದಿದೆ
ಪಡೀಲ್ ಕಣ್ಣೂರಿನಿಂದ ತಲಪಾಡಿ ಶಾರದಾ ವಿದ್ಯಾ ಸಂಸ್ಥೆಗೆ ಸಹೋದರನನ್ನು ಬಿಡಲು ಬರುತ್ತಿದ್ದ ಕಾರು ಚಾಲಕ ರಿಕ್ಷಾಗೆ ಢಿಕ್ಕಿ ಹೊಡೆದಿದ್ದಾನೆ. ರಿಕ್ಷಾದ ಹಿಂಬದಿಗೆ ಕಾರು ಢಿಕ್ಕಿ ಹೊಡೆಯುತ್ತಿದ್ದಂತೆ , ಸೇತುವೆಯ ಬದಿಯಲ್ಲಿ ಅಳವಡಿಸಿದ ಗಿಂಡಿಗೆ ರಿಕ್ಷಾ ತಗಲಿ ಚಾಲಕ ಹೊರಗೆಸೆಯಲ್ಪಟ್ಟು, ಅವರ ಮೇಲೆ ಕಾರು ಚಲಿಸಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಜಮಾಯಿಸಿದ ಉದ್ರಿಕ್ತರು ಕಾರು ಚಾಲಕನಿಗೆ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಗುಂಪನ್ನು ಚದುರಿಸಿ ಆಟೋ ರಿಕ್ಷಾ ಚಾಲಕನ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಕೇರಳ ನೋಂದಣಿಯ ಕಾರು ಇದಾಗಿದ್ದು ಟೆಂಪೋಗೆ ಬಡಿದು ಆಟೋ ರಿಕ್ಷಾಗೆ ಡಿಕ್ಕಿಯಾಗಿದೆ. ಎಡದ ಬದಿಯಲ್ಲೇ ಇದ್ದ ರಿಕ್ಷಾ ಡಿಕ್ಕಿಯ ರಭಸಕ್ಕೆ ಸೇತುವೆಯ ಅಂಚಿಗೆ ಸಿಲುಕಿದ್ದು ನಜ್ಜುಗುಜ್ಜಾಗಿದೆ.