ಉಡುಪಿ ಜನವರಿ 7: ಉಡುಪಿ ಜಿಲ್ಲೆಯಲ್ಲಿ ಮರಳು, ಕಲ್ಲು ಸಾಗಾಟದ ಟಿಪ್ಪರ್ ಲಾರಿಗಳಿಂದ ಅಪಘಾತದ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿತ ಸಲಕರಣೆಗಳನ್ನು ಸಾಗಾಟ ಮಾಡುವ ವಾಹನಗಳಿಗೆ ಸ್ಪೀಡ್ ಗವರ್ನರ್ ಆಳವಡಿಕೆ ಕಡ್ಡಾಯಗೊಳಿಸಿದೆ.

ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿಸಿ ಮರಳು, ಮಣ್ಣು, ಕಲ್ಲು ಸೇರಿದಂತೆ ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಮೇಲ್ಪಟ್ಟ ವಾಹನಗಳಿಗೆ ಗರಿಷ್ಠ 60 ಕಿ.ಮೀ ವೇಗ ಮಿತಿಯ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ವಾಹನಗಳು ಅತೀಯಾದ ವೇಗ ಹಾಗೂ ನಿರ್ಲಕ್ಷತನದ ಚಾಲನೆಯಿಂದ ನಿರಂತರ ವಾಗಿ ಅಪಘಾತಗಳು ಸಂಭವಿಸುತ್ತಿದ್ದು, ಆದುದರಿಂದ ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಈ ನಿಯಮ ಪಾಲನೆಗಾಗಿ ಎಲ್ಲಾ ಲಾರಿ ಚಾಲಕ ಮಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ವಿಚಾರವಾಗಿ ಚಾಲಕರಿಗೆ ಯಾವುದೇ ಮಾಹಿತಿ ಕೊರತೆಯಾಗದಂತೆ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಅದೇ ರೀತಿ ಬಸ್‌ಗಳಲ್ಲಿ ಬಾಗಿಲು ಅಳವಡಿಕೆ ಸಂಬಂಧಿಸಿದಂತೆ ಜ.20 ಕೊನೆಯ ದಿನಾಂಕವಾಗಿದ್ದು, ಆ ದಿನಾಂಕದ ನಂತರ ಬಾಗಿಲು ಇಲ್ಲದ ಬಸ್‌ಗಳಿಗೆ ದಂಡ ವಿಧಿಸಲಾಗುವುದು ಅಥವಾ ಬಸ್‌ಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.



