ಎಪ್ರಿಲ್ 18 ರ  ಮತದಾನಕ್ಕಾಗಿ ಕರಾವಳಿಗರಿಗೆ ಬೆಂಗಳೂರಿನಿಂದ ವಿಶೇಷ ರೈಲು

ಮಂಗಳೂರು ಎಪ್ರಿಲ್ 13: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಲು ರೈಲ್ವೆ ಇಲಾಖೆ ಕೂಡ ಸಾತ್ ನೀಡುತ್ತಿದೆ. ಎಪ್ರಿಲ್ 18 ರಂದು ನಡೆಯುವ ಮತದಾನಕ್ಕೆ ಬೆಂಗಳೂರಿನಲ್ಲಿರುವ ಕರಾವಳಿಯ ಮತದಾರರಿಗಾಗಿಯೇ ವಿಶೇಷ ರೈಲೊಂದನ್ನು ರೈಲ್ವೆ ಇಲಾಖೆ ಓಡಿಸಲಿದೆ.

ಲೋಕಸಭಾ ಚುನಾವಣೆ ಈಗಾಗಲೇ ರಂಗೇರಿದ್ದು, ಮತದಾನಕ್ಕೆ ಇನ್ನು ಬೆರಳಣಿಕೆ ದಿನಗಳು ಮಾತ್ರ ಬಾಕಿ ಇದೆ. ಬೆಂಗಳೂರು ಮಹಾನಗರ ಹಾಗೂ ಆಸುಪಾಸಿನ ನಗರಗಳಲ್ಲಿ ಉದ್ಯೋಗ ನಿಮಿತ್ತ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಲಕ್ಷಾಂತರ ಜನರು ತಾತ್ಕಾಲಿಕವಾಗಿ ನೆಲೆಸಿದ್ದಾರೆ. ಹೆಚ್ಚಿನವರು ತಮ್ಮ ಊರಿನಲ್ಲೇ ಮತದಾನದ ಹಕ್ಕನ್ನು ಹೊಂದಿದ್ದಾರೆ. ಸಂಚಾರ ವ್ಯವಸ್ಥೆಯಲ್ಲಿ ಲೋಪವಾದರೆ ಹೊರಭಾಗದಲ್ಲಿ ನೆಲೆಸಿರುವ ಕರಾವಳಿ ಮೂಲದ ಜನರ ಮತದಾನ ಪ್ರಮಾಣ ಕುಸಿತ ಗ್ಯಾರಂಟಿ ಎಂದು ಹೇಳಲಾಗಿದೆ.

ಅಲ್ಲದೆ ಮತದಾನದ ದಿನ ಹಾಗೂ ಶಾಲಾ ಮಕ್ಕಳ ರಜೆಯ ಕಾರಣ ಎಪ್ರಿಲ್ 17 ಮತ್ತು 18 ರಂದು ರಾತ್ರಿ ರೈಲುಗಳ ಟಿಕೆಟ್ ಈಗಾಗಲೇ ಬುಕ್ ಆಗಿದೆ. ಬಸ್ ಹಾಗೂ ವಿಮಾನ ಪ್ರಯಾಣ ದರ ದುಪ್ಪಟ್ಟು ಏರಿಕೆ ಹಿನ್ನೆಲೆಯಲ್ಲಿ ಮತದಾನ ಹಿಂದಿನ ದಿನ ಮಿತವ್ಯಯದ ರೈಲು ಪ್ರಯಾಣಕ್ಕೆ ಅಧಿಕ ಬೇಡಿಕೆ ಕಂಡುಬಂದಿದೆ. ಅಲ್ಲದೆ ಖಾಸಗಿ ಬಸ್ ಗಳು ಕೂಡ ಬಸ್ ದರವನ್ನು ದುಪ್ಪಟ್ಟು ಏರಿಕೆ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ ಮತದಾರರಿಗಾಗಿಯೇ ವಿಶೇಷ ತತ್ಕಾಲ್ ರೈಲು ಒಂದನ್ನು ಓಡಿಸಲು ನಿರ್ಧರಿಸಿದೆ.
ಯಶವಂತಪುರದಿಂದ ಪ್ರಯಾಣ: ಯಶವಂತಪುರ- ಕಾರವಾರ- ಯಶವಂತಪುರ ತತ್ಕಾಲ್ ವಿಶೇಷ ರೈಲು ಏಪ್ರಿಲ್ 17ರಂದು (ಮತದಾನ ನಡೆಯುವ ಹಿಂದಿನ ದಿನ) ರಾತ್ರಿ 10 ಗಂಟೆಗೆ ಯಶವಂತಪುರದಿಂದ ಪ್ರಯಾಣ ಆರಂಭಿಸಿ 18ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರು ಸೆಂಟ್ರಲ್, 10.18 ಉಡುಪಿ, 10.50 ಕುಂದಾಪುರ ಮತ್ತು ಮಧ್ಯಾಹ್ನ 3.30ಕ್ಕೆ ಕಾರವಾರ ತಲುಪಲಿದೆ.
ಇದೇ ರೈಲು ಏ.18ರಂದು (ಮತದಾನದ ದಿನ) ಸಾಯಂಕಾಲ 6 ಗಂಟೆಗೆ ಕಾರವಾರದಿಂದ ಪ್ರಯಾಣ ಆರಂಭಿಸಿ ರಾತ್ರಿ 8.50 ಕುಂದಾಪುರ, 9.30 ಉಡುಪಿ, 1.10 ಮಂಗಳೂರು ಸೆಂಟ್ರಲ್ ಮತ್ತು ಏ.19ರಂದು ಬೆಳಗ್ಗೆ 10.35ಕ್ಕೆ ಯಶವಂತಪುರ ತಲುಪಲಿದೆ.