ಮಂಗಳೂರು ಜನವರಿ 03: ಸಿಎಂ ಆಗ್ಲಿಕ್ಕೆ ಅರ್ಜೆಂಟ್ ಇಲ್ಲ..ಅದಕ್ಕಿನ್ನೂ 20 ವರ್ಷ ಕಾಲಾವಕಾಶ ಇದೆ‌. ಕ್ಷೇತ್ರದ ಮತದಾರರು ಇನ್ನೂ ನಾಲ್ಕು ಸಲ ಗೆಲ್ಲಿಸಿ ಕಳುಹಿಸಿದರೆ, ಅಮೇಲೆ ನೋಡುವ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಹುದ್ದೆಗೆ ತಾವೂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ‘ಅದಕ್ಕೆ ತರಾತುರಿ ಇಲ್ಲ. ಅದಕ್ಕಿನ್ನೂ 20 ವರ್ಷ ಕಾಲಾವಕಾಶ ಇದೆ‌ ಎಂದರು. ಬಳ್ಳಾರಿ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಶಾಸಕರು ಸಿನಿಮೀಯ ಶೈಲಿಯಲ್ಲಿ ಪರಸ್ಪರ ಕಚ್ಚಾಡುವುದು, ರಾಜಕೀಯ ದ್ವೇಷ ಸಾಧಿಸುವುದು ಸರಿಯಲ್ಲ. ಇ‌ಂತಹ ಘಟನೆಯಿಂದ ಜನಪ್ರತಿನಿಧಿಗಳ ಗೌರವ ಕಡಿಮೆ ಆಗುತ್ತದೆ. ಕೆಲವೇ ಕೆಲವು ಜನಪ್ರತಿನಿಧಿಗಳ ಈ ರೀತಿಯ ನಡವಳಿಕೆಯಿಂದ ಇತರರನ್ನೂ ಜನ ಅದೇ ದೃಷ್ಟಿಯಿಂದ ನೋಡುತ್ತಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಕೋಳಿ ಅಂಕ ನಿಷೇಧ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೋಳಿ ಅಂಕದಲ್ಲಿ ಜೂಜು ನಡೆಯುತ್ತದೆ ಎಂಬುದು ಪೊಲೀಸ್ ಇಲಾಖೆಯ ಆರೋಪ. ಜೂಜು ನಡೆದರೆ, ಅದರಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಸಾಂಪ್ರದಾಯಿಕ ಕೋಳಿ ಅಂಕವನ್ನೇ ತಡೆಯುವುದು ಸರಿಯಲ್ಲ ಎಂಬುದು ಆಯೋಜಕರ ವಾದ. ಈ ಸಮಸ್ಯೆಯನ್ನು ಸೂಕ್ತ ನಿಯಮಗಳನ್ನು ರೂಪಿಸುವ ಮೂಲಕವೇ ಬಗೆಹರಿಸಬೇಕಿದೆ. ಈ ಬಗ್ಗೆ ಕಾನೂನು ಸಚಿವರು ಮತ್ತು ಸರ್ಕಾರದ ಕಾನೂನು ಸಲಹೆಗಾರರ ಜೊತೆ ಮಾತನಾಡಿ, ಸಲಹೆಗಳನ್ನು ಕೊಟ್ಡಿದ್ದೇನೆ. ಈ ಸಮಸ್ಯೆ ಬಗೆಹರಿಯಬಹುದು ಎಂಬ ವಿಶ್ವಾಸ ಇದೆ’ ಎಂದರು.

Share Information