ಬೆಂಗಳೂರು ಮಾರ್ಚ್ 16: ರಾಜ್ಯ ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸದನವನ್ನೇ ಮುಂದೂಡಿ ಹೊರನಡೆದಿರುವ ಘಟನೆ ನಡೆದಿದೆ. ವಿಧಾನ ಮಂಡಲದ ಇತಿಹಾಸದಲ್ಲಿ ಸಭಾಧ್ಯಕ್ಷರೇ ಇಂತಹ ನಿರ್ಧಾರ ಕೈಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.

ವಿಧಾನಸಭೆಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಸಕಾಲದಲ್ಲಿ ಲಿಖಿತ ಉತ್ತರ ನೀಡದಿರುವುದು ಸಭಾಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದೆ. ಇಂದು ಸದನಕ್ಕೆ ಸಲ್ಲಿಕೆಯಾಗಬೇಕಿದ್ದ 230 ಪ್ರಶ್ನೆಗಳ ಪೈಕಿ ಕೇವಲ 80ಕ್ಕೆ ಮಾತ್ರ ಗೃಹ ಇಲಾಖೆಯಿಂದ ಉತ್ತರ ಲಭ್ಯವಾಗಿತ್ತು. ಐದನೇ ಬಾರಿಗೆ ತನ್ನ ಸೂಚನೆಯನ್ನು ಸರ್ಕಾರ ನಿರ್ಲಕ್ಷಿಸಿರುವುದನ್ನು ಗಮನಿಸಿದ ಯು.ಟಿ. ಖಾದರ್, “ಸರ್ಕಾರ ಸರಿಯಾದ ಕಾರಣ ನೀಡುವವರೆಗೆ ಸದನ ನಡೆಸುವುದಿಲ್ಲ” ಎಂದು ಕಲಾಪವನ್ನು ದಿಢೀರ್ ಮುಂದೂಡಿದರು.
ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಅವರು, “ಸರ್ಕಾರಕ್ಕೆ ಸಭಾಧ್ಯಕ್ಷರ ಆದೇಶದ ಮೇಲೆ ಬೆಲೆ ಇಲ್ಲ. ಇದೊಂದು ಬೇಜವಾಬ್ದಾರಿ ಸರ್ಕಾರ,” ಎಂದು ವಾಗ್ದಾಳಿ ನಡೆಸಿದರು.
ಸಭಾತ್ಯಾಗ ಮಾಡಿದ ಯು.ಟಿ. ಖಾದರ್ ಅವರನ್ನು ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾದರು. ಸ್ಪೀಕರ್ ಅವರ ಸಿಟ್ಟನ್ನು ಶಮನಗೊಳಿಸಲು ಸಿಎಂ ತಕ್ಷಣವೇ ನಿರ್ಲಕ್ಷ್ಯ ತೋರಿದ ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಉತ್ತರ ನೀಡದ 4 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲು ನಿರ್ದೇಶಿಸಿದ್ದಾರೆ.