ಶಿವಮೊಗ್ಗ ಜೂನ್ 30: ಮದುವೆಯಾದ ಕೇವಲ ಎರಡೇ ತಿಂಗಳಿಗೆ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಹಣಜಿ ಗ್ರಾಮದ ನಿವಾಸಿ ಸ್ವಾತಿ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಕೇವಲ ಎರಡು ತಿಂಗಳ ಹಿಂದಷ್ಟೇ ಶಿಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್ ಎಂಬುವವರನ್ನು ಮದುವೆಯಾಗಿದ್ದರು.

ಕುಟುಂಬದ ಮೂಲಗಳ ಪ್ರಕಾರ, ಮೃತ ಸ್ವಾತಿ ಅವರು ಗರ್ಭಿಣಿಯಾಗಿದ್ದು, ಇತ್ತೀಚೆಗೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರು. ಗರ್ಭಾವಸ್ಥೆಯ ಕಾರಣದಿಂದ ಅವರಿಗೆ ಅತಿಯಾದ ವಾಂತಿಯಾಗುತ್ತಿತ್ತು ಹಾಗೂ ಸರಿಯಾಗಿ ಊಟ, ತಿಂಡಿ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಹೆಚ್ಚಿನ ಆರೈಕೆಗಾಗಿ ಸುಮಾರು 20 ದಿನಗಳ ಹಿಂದೆ ಅವರು ಹಣಜಿ ಗ್ರಾಮದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು.
ಮಂಗಳವಾರ ಸ್ವಾತಿ ಅವರ ತಂದೆ ಮತ್ತು ತಾಯಿ ಎಂದಿನಂತೆ ಜಮೀನು ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿದ ಸ್ವಾತಿ, ಸೀರೆಯನ್ನು ಬಳಸಿ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಹೊಲದಲ್ಲಿದ್ದ ಪೋಷಕರಿಗೆ ಮಾಹಿತಿ ನೀಡಿ, ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ನೇಣಿನ ಕುಣಿಕೆಯಿಂದ ಸ್ವಾತಿ ಅವರನ್ನು ಕೆಳಗಿಳಿಸಿ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸೊರಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.