ಘಾಜಿಯಾಬಾದ್, ಜನವರಿ 02: ನಿವೃತ್ತ ಭಾರತೀಯ ವಾಯುಪಡೆಯ (ಐಎಎಫ್) ಸಿಬ್ಬಂದಿಯೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನ ಬಾಗ್‌ಪತ್ ಜಿಲ್ಲೆಯಲ್ಲಿ ನಡೆದಿದೆ.
ಸ್ವಂತ ಮಕ್ಕಳೇ ಈ ಕೊಲೆಯನ್ನು ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ಕೊಲೆ ಮಾಡಿದ ಐದು ದಿನದ ನಂತರ ಈ ವಿಚಾರ ತಿಳಿದಿದೆ. ಆಸ್ತಿಗಾಗಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 26 ರಂದು ಭಾರತೀಯ ವಾಯುಪಡೆಯ ನಿವೃತ್ತ ಸಿಬ್ಬಂದಿ ಯೋಗೇಶ್ ಕುಮಾರ್ ತಮ್ಮ ನಿವಾಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ವರದಿಯಲ್ಲಿ ಹೇಳಲಾಗಿದೆ.
ಯೋಗೇಶ್ ಕುಮಾರ್ ಅವರ ಪುತ್ರರು ತಂದೆಯ ಕೊಲೆಗೆ ಸುಪಾರಿ ನೀಡಿದರು ಎಂದು ಹೇಳಲಾಗಿದೆ. ಯೋಗೇಶ್ ಕುಮಾರ್ ಮನೆಗೆ ಬರುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಎರಡು ಗುಂಡು ಹಾರಿಸಿ, ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಅವರ ಮಕ್ಕಳೇ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಲೋಣಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿದ್ಧಾರ್ಥ ಗೌತಮ್ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಯೋಗೇಶ್ ತನ್ನ ಪುತ್ರರಾದ ನಿತೇಶ್ ಮತ್ತು ಗುಡ್ಡು ಮನೆಯನ್ನು ಮಾರಾಟ ಮಾಡಲು ಒತ್ತಾಯಿಸುತ್ತಿದ್ದನೆಂದು ಈ ಹಿಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರು ಎಂಬ ವಿಚಾರ ಬಹಿರಂಗವಾಗಿದೆ. ಆಸ್ತಿಯ ವಿವಾದಕ್ಕೆ ಅವರನ್ನು ಕೊಲೆ ಮಾಡಿಸಿರಬಹುದು ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಪೊಲೀಸರು ಹೇಳುವಂತೆ ಪುತ್ರರು ತಮ್ಮ ನೆರೆಮನೆಯ ಅರವಿಂದ್ ಕುಮಾರ್ (32) ಎಂಬಾತನಿಗೆ ತಂದೆಯನ್ನು ಕೊಲೆ ಮಾಡಲು 5 ಲಕ್ಷ ರೂ. ನೀಡಿದರು. ಅರವಿಂದ್ ಕುಮಾರ್ ತನ್ನ ಸೋದರ ಮಾವ ನವೀನ್ ಜೊತೆಗೆ ಸೇರಿ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.



