ಉಡುಪಿ ಜನವರಿ 26: ದೇಶಕ್ಕಾಗಿ ತನ್ನ ಕಾಲುಗಳನ್ನೇ ಕಳೆದುಕೊಂಡ ವೀಲ್ ಚೇರ್ ನಲ್ಲಿರುವ ಯೋಧನಿಗೆ ಸಾಸ್ತಾನ ಟೋಲ್ ಗೆಟ್ ನಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನವೇ ಅವಮಾನವಾದ ಘಟನೆ ನಡೆದಿದ್ದು, ಯೋಧರು ಘಟನೆಯ ಬಗ್ಗೆ ವಿಡಿಯೋ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

21 ಪ್ಯಾರಾ ಮಿಲಿಟರಿಯಲ್ಲಿ ಆರ್ಮಿ ಕಮಾಂಡೋ ಆಗಿ ಕೆಲಸ ಮಾಡಿದ್ದ ಶ್ಯಾಮರಾಜ್ ಎಂಬುವವರಿಗೆ ಸಾಸ್ತಾನದ ಟೋಲ್‌ನಲ್ಲಿ ಅವರಿಗೆ ಟೋಲ್‌ನಿಂದ ವಿನಾಯಿತಿ ಇದ್ದರೂ ಅಲ್ಲಿನ ಸಿಬ್ಬಂದಿ ಟೋಲ್ ಕಟ್ಟುವಂತೆ ಕೇಳಿ ಕಿರಿಕಿರಿ ಮಾಡಿ ಅವಮಾನಿಸಿದ್ದಾರೆ.
ಹಿಂದಿಯಲ್ಲಿ ಮಾತನಾಡಿದ ಅವರು ನಾನು ಆರ್ಮಿ ಕಮಾಂಡೋ ಶ್ಯಾಮರಾಜ್, 21 ಪ್ಯಾರಾದಲ್ಲಿ ಕೆಲಸ ಮಾಡಿದ್ದೇನೆ. ಇಂದು ಕರ್ನಾಟಕದ ಉಡುಪಿಯ ಬಳಿ ಇರುವ ಸಸ್ತಾನದ ಟೋಲ್‌ನಲ್ಲಿ ನನಗೆ ಟೋಲ್ ಹಣ ಪಾವತಿಸುವಂತೆ ಪೀಡಿಸುತ್ತಿದ್ದಾರೆ. ಟೋಲ್ ವಿನಾಯಿತಿಗೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ. ‘ನಾನು ಅಪರೇಷನ್ ಪರಾಕ್ರಮ್’ ಯುದ್ಧ ಸಂತ್ರಸ್ತನಾಗಿದ್ದೇನೆ(war casualty).ನನ್ನ ಪತ್ನಿಗೆ ಆರ್‌ಎಂಎ ಪ್ರಕಾರ ಪೋಸ್ಟಿಂಗ್ ಆಗಿದ್ದು, ಗಾಡಿಯೊಂದಿಗೆ ಹೋಗುತ್ತಿದ್ದೇನೆ. ಪ್ರತಿ ಟೋಲ್‌ನಲ್ಲಿ ನಾನು ಯಾವುದೇ ಶುಲ್ಕ ಪಾವತಿ ಮಾಡದೇ ಪಾಸಾಗಿ ಬಂದಿದ್ದೇನೆ. ಆದರೆ ಉಡುಪಿಯ ಸಾಸ್ತಾನದ ಟೋಲ್‌ನಲ್ಲಿ ಮಾತ್ರ ಅವರು ಹಣ ಕೊಡದ ವಿನಹಃ ಗಾಡಿಯನ್ನ ಮುಂದೆ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಇಲ್ಲಿ ಟೋಲ್ ಸಿಬ್ಬಂದಿಯಾದ ಶಿವರಾಮ್ ಹಾಗೂ ಸುರೇಶ್ ಎಂಬುವವರು ಹೇಳುತ್ತಿದ್ದಾರೆ.

ಇಂದು ಜನವರಿ 25, ನಾಳೆ ಗಣರಾಜ್ಯೋತ್ಸವ ಹಾಗಿದ್ದರೆ ನಾನು ಈ ವ್ಹೀಲ್‌ಚೇರ್‌ನಲ್ಲಿ ಏಕೆ ಕುಳಿತಿದ್ದೇನೆ ಎಂದು ನೀವೇ ಹೇಳಿ. ನಾನು ವ್ಹೀಲ್‌ಚೇರ್‌ನಲ್ಲಿ ಕುಳಿತಿರುವುದಕ್ಕೆ ಏನಾದರು ಅರ್ಥ ಇದೆಯೇ? ಒಬ್ಬರು ಯುದ್ಧ ಸಂತ್ರಸ್ತರನ್ನು ಆರ್ಮಿ ಕಾಯ್ದೆಯ ನಿಯಮಗಳಡಿ ಟ್ಯಾಕ್ಸ್ ಫ್ರೀ ಇದ್ದರೂ ಕೂಡ ಇಲ್ಲಿ ಟೋಲ್ ಕೇಳಲಾಗುತ್ತಿದೆ. ನಿತಿನ್ ಗಡ್ಕರಿಯವರೇ ನೀವೇ ಹೇಳಿ ಎಂದು ಆ ಯೋಧ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ ನಮಗೆ ಗೊತ್ತಿರಲಿಲ್ಲ, ನಾವು ಮೇಲಿನವರ ಆದೇಶದ ಪ್ರಕಾರ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮ ಮನೆಯಲ್ಲಿ ಯಾರಾದರೂ ಯೋಧರಿದ್ದರೆ ನಮ್ಮ ನೋವು ಏನು ಎಂದು ನಿಮಗೆ ಗೊತ್ತಾಗುತ್ತದೆ. ನಾವು ವ್ಹೀಲ್‌ಚೇರ್‌ನಲ್ಲಿ ಸುಮ್ಮನೇ ಕುಳಿತಿದ್ದು ಅಲ್ಲ ಅಣ್ಣ ಎಂದು ಆ ಯೋಧ ಶ್ಯಾಮರಾಜ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ ಕ್ಷಮಿಸಿ ಬಿಡಿ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗುತ್ತಿದ್ದು, ಟೋಲ್ ಸಿಬ್ಬಂದಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



