ಮಂಗಳೂರು ಜನವರಿ 09: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.

ಆರೋಪಿಯನ್ನು ತಕ್ಷಣ ಬಂಧಿಸುವಂತೆ ಪೋಲೀಸರನ್ನು ಪ್ರತಿಭಟನಾಕಾರು ಒತ್ತಾಯಿಸಿದ್ದಾರೆ. ದಲಿತ ಸಮಾಜದ ಮಹಿಳೆ ಮಾಡಿದ ಈ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ಆರೋಪಿಯ ಪರವಾಗಿ ಕಾಂಗ್ರೇಸ್ ಪಕ್ಷದ ಕೆಲವು ನಾಯಕರು ನಿಂತಿದ್ದಾರೆ ಎಂದು ಆರೋಪಿಸಿದ ಶಾಸಕ ವೇದವ್ಯಾಸ ಕಾಮತ್, ಇತರ ಘಟನೆಗಳು ನಡೆದಾದ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಪೋಲೀಸರಿಗೆ ಈ ಪ್ರಕರಣದ ಬಗ್ಗೆ ಕೇಸು ದಾಖಲಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ರವರು ಮಾತನಾಡಿ, ಇದು ಕೇವಲ ಒಬ್ಬ ದಲಿತ ಸಹೋದರಿಗಾದ ಅವಮಾನವಲ್ಲ, ಈ ದೇಶದ ಮಹಿಳೆಯೊಬ್ಬರ ಘನತೆ ಹಾಗೂ ಗೌರವದ ಮೇಲಿನ ನೇರ ದಾಳಿಯಾಗಿದೆ. ಆ ದುಷ್ಟನಿಗೆ ನನ್ನ ಸರ್ಕಾರ ಇರುವ ತನಕ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ. ಪೊಲೀಸರು ಇಂತವರ ವಿರುದ್ಧ ಕಾನೂನಿನ ತಾಕತ್ತನ್ನು ಪ್ರದರ್ಶಿಸಬೇಕು. ಹುಬ್ಬಳ್ಳಿಯಲ್ಲಿ ನಮ್ಮ ಪಕ್ಷದ ಮಹಿಳಾ ದಲಿತ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ಎಸಗಲಾಗಿದೆ. ಮಹಿಳೆಯರಿಗೆ ಕೇವಲ 2 ಸಾವಿರ ಮಾತ್ರವಲ್ಲ, ಅದರ ಜೊತೆಗೆ ಗೌರವ, ಸುರಕ್ಷತೆಯೂ ಬೇಕು ಎಂಬುದನ್ನು ಸರ್ಕಾರ ನೆನಪಿಡಲಿ. ಈ ಅಧಿಕಾರ ಶಾಶ್ವತವಲ್ಲ. ನಿಮ್ಮೆಲ್ಲಾ ಪಾಪ ಕಾರ್ಯಕ್ಕೆ ಕೆಲವೇ ವರ್ಷಗಳಲ್ಲಿ ಪ್ರತಿಫಲ ಸಿಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ಅಂಬೇಡ್ಕರ್ ಕಾಲದಿಂದಲೂ ಕಾಂಗ್ರೆಸ್ ದಲಿತರಿಗೆ ಅವಮಾನ ಮಾಡುತ್ತಲೇ ಬಂದಿದೆ. ಈಗ ದಲಿತ ಸಮುದಾಯದ ಶಾಸಕಿಯೊಬ್ಬರಿಗೆ ಅವಮಾನ ಮಾಡುವ ಮೂಲಕ ಅದು ಮುಂದುವರಿದಿದೆ ಎಂದರು. ಒಂದು ಮಹಿಳಾ ಶಾಸಕಿಯ ಅವಹೇಳನಕಾರಿ ಪೋಸ್ಟ್ ಹಾಕಿದರೂ ಯಾವುದೇ ಕಾಂಗ್ರೇಸ್ ನಾಯಕ ಅದನ್ನು ಖಂಡಿಸುವ ಕೆಲಸ ಮಾಡಿಲ್ಲ. ಇದು ಕಾಂಗ್ರೇಸ್ ಮೇಲೆ ಅನುಮಾನ ಬರುವಂತೆ ಮಾಡಿದೆ ಎಂದು ಸಂಸದ ಬ್ರಿಜೇಶ್ ಚೌಟ ಆರೋಪಿಸಿದರು.