ಮಂಗಳೂರು ಅಕ್ಟೋಬರ್ 10: ಕಾಂತಾರ ಚಾಪ್ಟರ್ 1 ಈಗಾಗಲೇ 500 ಕೋಟಿಗೂ ಅಧಿಕ ಹಣ ಮಾಡಿ ಮುಂದುವರೆಯುತ್ತಿದೆ. ಈ ನಡುವೆ ದೈವಗಳ ಅವಹೇಳನವೂ ಕೂಡ ಮುಂದುವರೆದಿದ್ದು, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ದೈವದ ನುಡಿಯ ಬಗ್ಗೆಯೇ ಅಪಹಾಸ್ಯ ಮಾಡುವ ಮಟ್ಟಿಗೆ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ.

ಕಾಂತಾರ ಸಿನೆಮಾ ಬಿಡುಗಡೆಯಾದ ಬಳಿಕ ಇದೀಗ ಕರಾವಳಿಯಲ್ಲಿ ಚಿತ್ರದಲ್ಲಿ ದೈವಾರಾಧನೆ ಬಳಸಿದ ಬಗ್ಗೆ ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ. ಈ ಮಧ್ಯೆ ತುಳುನಾಡು ದೈವಗಳ ನುಡಿಗಳ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದ್ದು, ಇದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕಾಂತಾರ ಸಿನಿಮಾಗೆ ದೈವ ಅನುಮತಿ ನೀಡಿತ್ತಾ ಎನ್ನುವ ಹೊಸ ಚರ್ಚೆಗಳು ಸಂಚಲನ ಮೂಡಿಸುತ್ತಿವೆ.
ನಿನ್ನೆಯಷ್ಟೇ ಕಾಂತಾರ ಸಿನಿಮಾ ಹಾಗೂ ಅವುಗಳ ಅನುಕರಣೆ ವಿರುದ್ದ ದೈವಾರಾಧಕರು ದೈವಕ್ಕೆ ದೂರು ನೀಡಿದ್ದರು. ಈ ವೇಳೆ ಪಿಲಿಚಂಡಿ ದೈವ ದೈವಾರಾಧಕರ ಹೋರಾಟಕ್ಕೆ ಅಭಯ ನೀಡಿತ್ತು. ಆದರೆ ಇದೀಗ ಪಿಲಿಚಂಡಿ ದೈವದ ನುಡಿಯ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದೆ. ಕಾಂತಾರ ಸಿನಿಮಾದ ಡೈಲಾಗ್ ಬಳಸಿ ದೈವ ನುಡಿ ವಿರುದ್ದ ವ್ಯಂಗ್ಯ ಮಾಡಲಾಗುತ್ತಿದ್ದು, ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಎಂದು ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಎಸಗಲಾಗಿದೆ.
ನಿನ್ನೆ ಪ್ರಾರ್ಥನೆ ಸಲ್ಲಿಸಿದ್ದ ದೈವಾರಾಧಕರಿಗೆ ಅಭಯ ನೀಡಿದ್ದ ಬಜಪೆಯ ಪೆರಾರದ ಪಿಲ್ಚಂಡಿ ದೈವ, ‘ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ’ ಎಂದು ದೈವ ನುಡಿ ಕೊಟ್ಟಿತ್ತು. ‘ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನ ಆಸ್ಪತ್ರೆಗೆ ಸುರಿಸುತ್ತೇನೆ’ ಎಂದು ಪಿಲ್ಚಂಡಿ ದೈವದ ನುಡಿಯಾಗಿತ್ತು. ಈ ದೈವ ನುಡಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ.





