ಏರುಗತಿಯಲ್ಲಿ ಚಿನ್ನದ ಬೆಲೆ ಕರಾವಳಿಯಲ್ಲಿ ಹೆಚ್ಚುತ್ತಿರುವ ಕಳ್ಳತನ ದರೋಡೆಗಳು

ಮಂಗಳೂರು ಸೆಪ್ಟೆಂಬರ್ 20: ಏರುತ್ತಿರುವ ಚಿನ್ನದ ಬೆಲೆ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ತಲೆ ನೋವು ತಂದಿಟ್ಟಿದೆ. ಒಂದು ಕಡೆ ಚಿನ್ನದ ಬೆಲೆ ಏರುತ್ತಿದ್ದಂತೆ ಜಿಲ್ಲೆಯಲ್ಲಿ ಚಿನ್ನದ ಕಳ್ಳತನ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಸುಮಾರು 2 ಕೋಟಿಗೂ ಅಧಿಕ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಆಗಿದೆ.

ದೇಶದಲ್ಲಿ ಚಿನ್ನದ ಬೆಲೆ ಏರುತ್ತಿದ್ದಂತೆ ಗ್ರಾಹಕರು ಬೆಲೆ ನೋಡಿ ತಲೆಕೆಡಿಸಿಕೊಳ್ಳಬೇಕಾಗಿದೆ. ಆದರೆ ಈಗ ಮನೆಯಲ್ಲಿ ಚಿನ್ನ ಇದ್ದರೂ ಕೂಡ ಭಯದಲ್ಲಿ ಬದುಕುವಂತಾಗಿದ್ದು ಜಿಲ್ಲೆಯಲ್ಲಿ ಕಳೆದ 2 ತಿಂಗಳಿನಿಂದ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣಗಳೇ ಸಾಕ್ಷಿ.

ಪೊಲೀಸ್ ಮಾಹಿತಿ ಪ್ರಕಾರ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ 14 ಪ್ರಕರಣಗಳು ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈಗಾಗಲೇ 2 ಚಿನ್ನಾಭರಣ ದರೋಡೆ ಪ್ರಕರಣಗಳು ದಾಖಲಾಗಿದೆ.

ಮಂಗಳೂರು ನಗರದಲ್ಲಿ ಈ ತಿಂಗಳಲ್ಲಿ ಎರಡು ಚಿನ್ನಾಭರಣ ದರೋಡೆ ಪ್ರಕರಣಗಳು ನಡೆದಿದ್ದು , ಒಂದು ನಗರದ ಹೃದಯ ಭಾಗದಲ್ಲಿರುವ ಅಪಾರ್ಟ್ ಮೆಂಟ್ ಒಂದರಿಂದ 35 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವನ್ನು ಕಳ್ಳರು ದೋಚಿದ್ದಾರೆ. ಇನ್ನೊಂದು ಭವಂತಿ ಸ್ಟ್ರೀಟ್ ನಲ್ಲಿರುವ ಚಿನ್ನಾಭರಣ ಮಳಿಗೆಯ ಗೋಡೆ ಒಡೆದು 75 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಗಿಂತ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಚಿನ್ನಾಭರಣ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಪರಿಸರದಲ್ಲಿ ಹೆಚ್ಚಾಗಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದೆ.

ಹೆಚ್ಚಾಗಿ ಬೇರೆ ಬೇರೆ ಜಿಲ್ಲೆಗಳಿಂದ ಬಂದ ವೃತ್ತಿಪರ ಕಳ್ಳರು ಈ ಕಳ್ಳತನ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು, ಒಂದೇ ಪರಿಸರದ ಹಲವಾರು ಮನೆಗಳಲ್ಲಿ ದರೋಡೆ ನಡೆಸಿ ಪರಾರಿಯಾಗುತ್ತಿದ್ದಾರೆ.

ದರೋಡೆ ಪ್ರಕರಣಗಳ ಕುರಿತಂತೆ ದಕ್ಷಿಣಕನ್ನಡ ಪೊಲೀಸ್ ಇಲಾಖೆ ಈಗಾಗಲೇ ಹಲವು ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿದ್ದು, ರಾತ್ರಿ ಸಮದಲ್ಲಿ ಪೊಲೀಸ್ ಪೆಟ್ರೋಲಿಂಗ್ ನ್ನು ಹೆಚ್ಚಿಸಲಾಗಿದೆ. ಅಲ್ಲದೆ ಸಾರ್ವಜನಿಕರಲ್ಲಿ ಸುರಕ್ಷಿತವಾಗಿ ಇರುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.

Facebook Comments

comments