ಕೊಲ್ಲೂರು ಮೇ 02: ದನಗಳಿಗೆ ಹುಲ್ಲು ಕೊಯ್ಯಲು ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಕೊಲ್ಲೂರಿನಲ್ಲಿ ಸಂಭಿಸಿದೆ. ಮೃತರನ್ನು ಕೆರಾಡಿ ಗ್ರಾಮದ ಪ್ರೇಮ ಶೆಡ್ತಿ (47) ಎಂದು ಗುರುತಿಸಲಾಗಿದೆ.

ಮೇ 1ರಂದು ಸಂಜೆ ಸುಮಾರು 6:00 ರಿಂದ 7:00 ಗಂಟೆಯ ನಡುವೆ ಪ್ರೇಮ ಶೆಡ್ತಿ ಅವರು ತಮ್ಮ ಮನೆಯ ಪಕ್ಕದ ತೋಟದಲ್ಲಿ ದನಗಳಿಗೆ ಹುಲ್ಲು ಕೊಯ್ಯುತ್ತಿದ್ದರು. ಈ ವೇಳೆ ಅವರ ಬಲಗಾಲಿಗೆ ಯಾವುದೋ ಹಾವು ಕಚ್ಚಿದಂತಾಗಿದೆ. ಕೂಡಲೇ ಮನೆಗೆ ಬಂದು ಪರಿಶೀಲಿಸಿದಾಗ ಕಾಲಿನ ಎರಡು ಮೂರು ಕಡೆಗಳಲ್ಲಿ ಹಾವಿನ ಕಡಿತದ ಗುರುತುಗಳು ಕಂಡುಬಂದಿವೆ.
ತಕ್ಷಣವೇ ಅವರನ್ನು ರಾತ್ರಿ 9:30ರ ಸುಮಾರಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿ, ಆಕೆ ಆಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.