ಮುಂಬೈ ಡಿಸೆಂಬರ್ 07: ಕ್ರಿಕೆಟ್ ತಾರೆ ಸ್ಮೃತಿ ಮಂದನಾ ಮತ್ತು ಗಾಯಕ ಪಾಲಾಶ್ ಮುಚ್ಚಲ್ ಜೊತೆಗಿನ ವಿವಾಹದ ಸುದ್ದಿಗೆ ಇದೀಗ ಇದೀಗ ಸ್ವತಃ ಸ್ಮೃತಿ ಮಂಧಾನಾ ತೆರೆ ಎಳೆದಿದ್ದು, ನಮ್ಮ ಮದುವೆ ಕ್ಯಾನ್ಸಲ್ ಆಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಸ್ಮೃತಿ ಮಂಧಾನ, “ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಈ ಸಮಯದಲ್ಲಿ ಈ ಬಗ್ಗೆ ನಾನು ಮಾತನಾಡುವುದು ಮುಖ್ಯ ಎಂದು ಭಾವಿಸುತ್ತೇನೆ. ನಾನು ತುಂಬಾ ಖಾಸಗಿ ವ್ಯಕ್ತಿ, ಮತ್ತು ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ. ಇದಾಗ್ಯೂ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ನಾನು ಬಯಸುತ್ತೇನೆ ಮತ್ತು ನಿಮ್ಮೆಲ್ಲರೂ ಅದೇ ರೀತಿ ಮಾಡಬೇಕೆಂದು ಒತ್ತಾಯಿಸುತ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ನಮಗೆ ಮುಂದುವರಿಯಲು ಅವಕಾಶ ನೀಡಬೇಕೆಂದು ನಾನು ವಿನಂತಿಸುತ್ತೇನೆ.”
“ನಮ್ಮೆಲ್ಲರನ್ನೂ ಒಂದು ಉದ್ದೇಶ ಮುನ್ನಡೆಸುತ್ತದೆ ಎಂದು ಭಾವಿಸುತ್ತೇನೆ. ನನಗೆ, ಅದು ಯಾವಾಗಲೂ ನನ್ನ ದೇಶವನ್ನು ಪ್ರತಿನಿಧಿಸುವುದಾಗಿದೆ. ನಾನು ಭಾರತಕ್ಕಾಗಿ ದೀರ್ಘಕಾಲ ಆಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಲು ಆಶಿಸುತ್ತೇನೆ. ಅದುವೇ ನನ್ನ ಗಮನವಾಗಿರುತ್ತದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಮುಂದುವರಿಯುವ ಸಮಯ ಇದು” ಎಂದು ಎಂದು ಸ್ಮೃತಿ ಇನ್ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸ್ಮೃತಿ ಮಂಧಾನ ಹಾಗೂ ಪಾಲಾಶ್ ಮುಚ್ಚಲ್ ಅವರ ಮದುವೆ ನವೆಂಬರ್ 23 ರಂದು ನಡೆಯಬೇಕಿತ್ತು. ಆದರೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರ ಹಠಾತ್ ಅನಾರೋಗ್ಯದಿಂದಾಗಿ ಸಮಾರಂಭವನ್ನು ಮುಂದೂಡಲಾಯಿತು. ಅವರ ತಂದೆ ಹೃದಯಾಘಾತದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಪಾಲಾಶ್ ಮುಚ್ಚಲ್ ಜೊತೆಗಿನ ವಿವಾಹವನ್ನು ರದ್ದುಗೊಳಿಸಿರುವುದಾಗಿ ಸ್ಮೃತಿ ಮಂಧಾನ ತಿಳಿಸಿದ್ದಾರೆ.



