ಮಂಗಳೂರಿನ ನೀಲಾಕಾಶದಲ್ಲಿ ಪುಟಾಣಿ ವಿಮಾನಗಳ ಹಾರಾಟ

ಮಂಗಳೂರು ಸೆಪ್ಟೆಂಬರ್ 20: ಪ್ರಶಾಂತವಾಗಿದ್ದ ಮಂಗಳೂರಿನ ನೀಲಾಕಾಶಲ್ಲಿ ಏಕಾಏಕಿ ಪುಟಾಣಿ ವಿಮಾನಗಳು ಅತ್ತಿಂದತ್ತ ಹಾರಾಡತೊಡಗಿತ್ತು. ಪುಟ್ಟ ಪುಟ್ಟ ಹೆಲಿಕಾಪ್ಟರ್ ಗಳ ಸಾಹಸ ನೋಡುಗರ ಎದೆಯನ್ನು ಝಲ್ ಎನಿಸಿತು. ಹೌದು ಇದು ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಏರೋಫಿಲಿಯಾ ಪ್ರದರ್ಶನದ ಸಣ್ಣ ಝಲಕ್.

ಮಂಗಳೂರಿನ ನೀಲಾಕಾಶ ಇಂದು ಪುಟ್ಟ ವಿಮಾನಗಳ ಸಾಹಸಮಯ ಹಾರಾಟಕ್ಕೆ ಸಾಕ್ಷಿಯಾಗಿತ್ತು. ನೇತ್ರಾವತಿಯ ತಟದಲ್ಲಿರುವ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ನಿಸರ್ಗ ರಮಣೀಯ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಏರೊಫೀಲಿಯಾ ಸ್ಪರ್ಧೆ ನಡೆಯಿತು. ಜೈಪುರ ಐಐಟಿ, ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಸ್ಥಳೀಯ ಕಾಲೇಜುಗಳ ವಿವಿಧ ವಿದ್ಯಾರ್ಥಿಗಳು ತಮ್ಮ ಪುಟಾಣಿ ವಿಮಾನಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಏರೊಫಿಲಿಯಾ 2019ರ ಪ್ರಮುಖ ಆಕರ್ಷಣೆ ಯಾಗಿ ಬೆಂಗಳೂರಿನ‌ 13 ವರ್ಷದ ಬಾಲಕ ಆದಿತ್ಯ ಸುಮಾರು 9 ಬಗೆಯ ವಿಮಾನಗಳ ಹಾರಾಟ ನಡೆಸಿದರು…ರಿಮೋಟ್ ಕಂಟ್ರೋಲ್ ಮೂಲಕ ಆಕಾಶದಲ್ಲಿ ವಿಮಾನಗಳ ವಿವಿಧ ಸಾಹಸಮಯ ಪ್ರದರ್ಶನವನ್ನು ಬಾಲಕ ಆದಿತ್ಯ ನೀಡಿದರು.ಸಣ್ಣ ಎಂಜಿನ್ ಗಳ ವಿಮಾನದಲ್ಲಿ ಹಿಡಿದು‌ 30cc ಸಾಮರ್ಥ್ಯದ ಇಂಜಿನ್ ಉಳ್ಳ ವಿಮಾನಗಳೂ ಬಾನಂಗಳದಲ್ಲಿ ಹಾರಾಡಿದವು
ಏರೊನಾಟಿಕ್ಸ್ ಕ್ಷೇತ್ರದಲ್ಲಿ ಆಸಕ್ತಿ ವಹಿಸಿಕೊಂಡಿರುವ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ವತಿಯಿಂದ ಪ್ರೌಢಶಾಲೆಯಿಂದ ಇಂಜಿನಿಯರಿಂಗ್ ವರೆಗಿನ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ವಿಮಾನಯಾನ ಕ್ಷೇತ್ರದಲ್ಲಿ ಭವಿಷ್ಯದ ಆಗುತ್ತಿರುವ ಬದಲಾವಣೆ ಕುರಿತು ಅನ್ವೇಷಣೆ ಆಲೋಚನೆಗೆ ಏರೊ ಮಾದರಿ ಸ್ಪರ್ಧೆ ವೇದಿಕೆ ಕಲ್ಪಿಸಿದೆ. ನವೀನ ಯುಗದಲ್ಲಿ ವಿಮಾನಯಾನ ಕ್ಷೇತ್ರ ರಾಷ್ಟ್ರದ ಅಭಿವೃದ್ಧಿಗೆ ಯಾವ ರೀತಿ ಸಹಕಾರಿಯಾಗಬಲ್ಲದು ಎಂಬುದನ್ನು ಉತ್ಸಾಹಿ ಯುವ ಮನಸ್ಸುಗಳಿಗೆ ತಿಳಿಸುವುದೇ ಈ ಸ್ಪರ್ಧೆಯ ಉದ್ದೇಶವಾಗಿದೆ.

ಒಟ್ಟಿನಲ್ಲಿ ಮಂಗಳೂರಿನಲ್ಲಿ ನಡೆದ ಈ ಏರ್ ಷೋ ವಿದ್ಯಾರ್ಥಿಗಳ, ಸಾರ್ವಜನಿಕರ ಮನಸೂರೆಗೊಳಿಸಿತು. ಸುಮಾರು ‌10 ಕ್ಕೂ ಹೆಚ್ಚು ಬಗೆಯ ಪುಟಾಣಿ ವಿಮಾನಗಳು,10 ಕ್ಕೂ ಹೆಚ್ಚು ಡ್ರೋಣ್ ಗಳು, ಹೆಲಿಕಾಪ್ಟರ್ ಗಳು ಭವಿಷ್ಯದ ಇಂಜಿನಿಯರ್ ಗಳ ಚಾಕಚಕ್ಯತೆಯನ್ನು ಪ್ರದರ್ಶಿಸಿತು.