ಮೈಸೂರು/ಕೆ.ಆರ್. ನಗರ ಎಪ್ರಿಲ್ 19: ಅರ್ಕೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಭಾನುವಾರ ಈಜಲು ತೆರಳಿದ್ದ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉರುಸ್ ಆಚರಣೆಗೆಂದು ಬಂದಿದ್ದ ಸಂಬಂಧಿಕರು ಈ ದುರಂತಕ್ಕೆ ತುತ್ತಾಗಿದ್ದಾರೆ.

ಮೃತರನ್ನು ಮೈಸೂರಿನ ಉದಯಗಿರಿ ಮೂಲದ, ಸದ್ಯ ಊಟಿಯ ನಿವಾಸಿಯಾಗಿದ್ದ ಫಾತಿಮಾ (42), ಬೆಂಗಳೂರಿನ ಎಸ್ಬಿಆರ್ ಲೇಔಟ್ನ ಆಟೊರಿಕ್ಷಾ ಚಾಲಕ ಮಹಮ್ಮದ್ ಯಾಸೀನ್ (23), ನೇಹಾ ಕೌಸರ್ (19), ಮೈಸೂರಿನ ಉದಯಗಿರಿಯ ಉಜೇರ್ (5), ಬೆಂಗಳೂರಿನ ಕಾಡಗೌಡನಹಳ್ಳಿಯ ಎಮ್ಮೆ ಐಮಾನ್ (13) ಹಾಗೂ ಕೆ.ಆರ್.ನಗರ ಮುಸ್ಲಿಂ ಬ್ಲಾಕ್ನ ಅಫೀಫ್ ಅಹಮದ್ (13) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಹತ್ತಿರದ ಸಂಬಂಧಿಕರಾಗಿದ್ದಾರೆ. ಉರುಸ್ ಆಚರಣೆಗೆಂದು ಇಲ್ಲಿಗೆ ಬಂದಿದ್ದರು. ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದರು. ಒಬ್ಬರನ್ನೊಬ್ಬರನ್ನು ರಕ್ಷಿಸಲು ಮುಂದಾದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆ.ಆರ್. ನಗರ ಪಟ್ಟಣಕ್ಕೆ ನೀರು ಪೂರೈಸಲು ಹಳೆಎಡತೊರೆಯ ಪಂಪ್ಹೌಸ್ ಬಳಿ ಮರಳು ಮೂಟೆಗಳನ್ನು ಹಾಕಿ ನೀರು ಸಂಗ್ರಹಿಸಲಾಗಿತ್ತು. ಇಲ್ಲಿ ನೀರಿನ ಆಳ ತಿಳಿಯದೆ ಈಜಲು ಇಳಿದಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸಲ್ಮಾ ಬಾನು, ಆಸೀಯಾ ಹಾಗೂ ಜುಬೇದಾ ಎಂಬುವವರು ಅಸ್ವಸ್ಥಗೊಂಡಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.