ಶಿರಸಿ ಎಪ್ರಿಲ್ 21: ನ್ಯೂ ಕೆಹೆಚ್ಬಿ ಕಾಲೋನಿಯ ವೈದ್ಯ ಡಾ. ರಮೇಶ್ ಕಲಗುಟಕರ ಅವರ ಕೊಲೆ ಪ್ರಕರಣವನ್ನು ಶಿರಸಿ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿದ್ದು, ಹಂತಕ ಗೆಳೆಯನನ್ನು ಬಂಧಿಸಿದ್ದಾರೆ. ತೀರ್ಥಹಳ್ಳಿಯ ಪಡುಬೈಲ್ ನಿವಾಸಿ ಮಂಜುನಾಥ್ ನಾಯ್ಕ್ (61) ಬಂಧಿತ ಆರೋಪಿ.

ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಡಾ. ರಮೇಶ್ ಅವರು, ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ಗೆಳೆಯ ಮಂಜುನಾಥ್ ಜೊತೆ ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ಮದುವೆಗಾಗಿ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಗೆಳೆಯನಿಗೆ ತೋರಿಸಿದ್ದರು. ಇದನ್ನು ಕಂಡ ಮಂಜುನಾಥ್ಗೆ ಹಣದ ದುರಾಸೆ ಉಂಟಾಗಿದೆ.
ಭಾನುವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಡಾ. ರಮೇಶ್ ನಿದ್ರೆಯಲ್ಲಿದ್ದಾಗ, ಮಂಜುನಾಥ್ ಕಬ್ಬಿಣದ ರಾಡಿನಿಂದ ಅವರ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ₹15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹50 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದನು. ಶಿರಸಿ ನ್ಯೂ ಮಾರುಕಟ್ಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಂತಕನನ್ನು ಹೆಡೆಮುರಿ ಕಟ್ಟಿದ್ದಾರೆ.