Connect with us

  DAKSHINA KANNADA

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ವ್ಯಾಪಕ ಖಂಡನೆ

  ಮಂಗಳೂರು, ಸೆಪ್ಟೆಂಬರ್ 06 : ಪತ್ರಕರ್ತೆ , ಸಾಹಿತಿ , ಪ್ರಗತಿಪರ ಚಿಂತಕಿ , ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಛೇರಿ ಬಳಿ ಮೊಂಬತ್ತಿಗಳನ್ನು ಉರಿಸಿ ಗೌರಿ ಲಂಕೇಶ್ ಅವರ ಹತ್ತಯೆಯನ್ನು ಖಂಡಿಸಿದರು.

  ಗೌರಿ ಲಂಕೇಶ್ ಹತ್ಯೆಗೆ ವ್ಯಾಪಕ ಖಂಡನೆ:

  ಪತ್ರಕರ್ತೆ , ಸಾಹಿತಿ , ಪ್ರಗತಿಪರ ಚಿಂತಕಿ , ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ನಾಡಿನ ಅನೇಕ ಗಣ್ಯರು, ರಾಜಕೀಯ ಧುರೀಣರು ತೀವೃವಾಗಿ ಖಂಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯನ್ನು ಸಚಿವ ಯು.ಟಿ.ಖಾದರ್ ಖಂಡಿಸಿದ್ದಾರೆ. ಸಮಾಜದ ಕಟ್ಟಕಡೆಯ ಜನರ ಶಕ್ತಿಗೆ ಹಾಕಿದ ಗುಂಡೇಟು ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

  ನನ್ನ ಆತ್ಮೀಯರೂ, ರಾಷ್ಟ್ರಮಟ್ಟದ ಪ್ರಗತಿಪರ ಚಿಂತಕರೂ, ಸಮಾಜದ ಶೋಷಿತ ವರ್ಗದ ಶಕ್ತಿಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆ ಕನ್ನಡ ನಾಡಿಗೆ ಮಾಡಿದ ದ್ರೋಹವಾಗಿದೆ, ಇದು ಖಂಡನೀಯ. ಇದರ ಹಿಂದಿರುವ ದುಷ್ಟ ಶಕ್ತಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

  ಕಳೆದ ವಾರವಷ್ಟೇ ವಿಧಾನಸೌಧದಲ್ಲಿ ತನ್ನನ್ನು ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದ ಮನವಿಯನ್ನು ನೀಡಿದ್ದರು. ರಾಜ್ಯದ ಕಟ್ಟಕಡೆಯ ಜನರ ಧ್ವನಿಯಾಗಿದ್ದ ಗೌರಿ ಲಂಕೇಶ್ ತನ್ನ ತಂದೆ ಲಂಕೇಶ್ ಹಾದಿಯಲ್ಲಿ ನಡೆಯುತ್ತಾ ಸಂಚಲನ ಮೂಡಿಸಿದ್ದರು. ಅವರ ಹತ್ಯೆ ದೊಡ್ಡ ದುರಂತ. ಕ್ರೂರ ಮನಸ್ಸಿನ ಉಗ್ರಗಾಮಿಗಳಾದ ತಪ್ಪಿತಸ್ಥ ಹಂತಕರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.

  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡನೆ:

  ಖ್ಯಾತ ಸಾಹಿತಿ,ಹೋರಾಟಗಾರ್ತಿ,ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಅಧ್ಯಕ್ಷರಾದ ನವಾಜ್ ಉಳ್ಳಾಲ್ ತೀವ್ರವಾಗಿ ಖಂಡಿಸಿದ್ದಾರೆ. ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆ ನಡೆದು ಎರಡು ವರುಷಗಳು ಕಳೆದರೂ ಹತ್ಯೆಯ ಹಿಂದಿನ ಸೂತ್ರಧಾರಿಗಳನ್ನು ಬಂಧಿಸುವ ಕಾರ್ಯ ನಡೆದಿಲ್ಲ.

  ಏತನ್ಮಧ್ಯೆ ಅಭಿವ್ಯಕ್ತಿ ಸ್ಞಾತಂತ್ರ್ಯವನ್ನು ನಿರ್ಭಯವಾಗಿ ವ್ಯಕ್ತಪಡಿಸುತ್ತಿದ್ದ ಮತ್ತು ಮತಾಂಧ ಶಕ್ತಿಗಳ ವಿರುದ್ಧ ನಿರಂತರ ವೈಚಾರಿಕ ಸಂಘರ್ಷಕ್ಕಿಳಿದಿದ್ದ ಗೌರಿ ಲಂಕೇಶ್ ರವರ ಹತ್ಯೆಯು ಸಮಾಜದಲ್ಲಿ ತುಂಬಲಾರದ ನಷ್ಟವಾಗಿದ್ದು, ದುಷ್ಕರ್ಮಿಗಳನ್ನು ಮತ್ತು ಷಡ್ಯಂತ್ರದ ರೂವಾರಿಗಳನ್ನು ಕಾನೂನಿನ ಕುಣಿಕೆಗೆ ತರಲು ಸರಕಾರವು ತುರ್ತು ಕ್ರಮಕೈಗೊಳ್ಳಬೇಕು ಮತ್ತು ಈ ಹತ್ಯಾ ಪ್ರಕರಣದ ತನಿಖೆಯನ್ನು ಎನ್.ಐ.ಎ.ಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ,

  ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಹತೈ ಎಸ್ ಡಿ ಪಿಐ ಖಂಡನೆ :

  ಪತ್ರಕರ್ತೆ, ಸಾಹಿತಿ, ಚಿಂತಕಿಯು ಮತ್ತು ಲಂಕೇಶ್ ಪತ್ರಿಕೆಯ ಸಂಪಾದಕರು ಆಗಿದ್ದ ಗೌರಿ ಲಂಕೇಶ್ ನನ್ನು ಫ್ಯಾಸಿಸ್ಟ್ ಶಕ್ತಿಗಳು ಅವರ ನಿವಾಸದಲ್ಲಿ ಗುಂಡಿಕ್ಕಿ ಬರ್ಬರವಾಗಿ ಅಮಾನವೀಯ ರೀತಿಯಲ್ಲಿ ಹತೈಗೈದದನ್ನು ಎಸ್ ಡಿ ಪಿಐ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

  ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದ,ಹೋರಾಟವೇ ಜೀವನ ಎಂಬಂತೆ ಎಲ್ಲಾ ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ನೇತೃತ್ವವನ್ನು ವಹಿಸುತ್ತಿದ್ದಂತಹ ವಿಚಾರವಾದಿ ಯನ್ನು ಇವತ್ತು ಕಳೆದುಕೊಂಡದ್ದು ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.

  ವಿಚಾರವಾದಿ ಎಂ.ಎಂ.ಕಲ್ಬುರ್ಗಿ ಯನ್ನು ಹತೈಗೈದು ವರ್ಷಗಳೇ ಕಳೆದರೂ ಇದುವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸರಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಸಾಧ್ಯವಾಗಲಿಲ್ಲ.ಇದೀಗ ಅದೇ ರೀತಿಯಲ್ಲೇ ಫ್ಯಾಸಿಸ್ಟ್ ಶಕ್ತಿಗಳು ಗೌರಿ ಲಂಕೇಶ್ ನನ್ನು ಕೊಲೆನಡೆಸಿದ್ದು ಸರಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿ ಈ ಹತೈಯನ್ನು ಗಂಭೀರವಾಗಿ ಪರಿಗಣಿಸಿ ಕ್ಷಿಪ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply