LATEST NEWS
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಊಟಿ, ಜನವರಿ 23: ಮನುಷ್ಯನ ಕ್ರೂರಿ ಬುದ್ಧಿಗೆ ಕೊನೆಯಿಲ್ಲ ಎನ್ನುತ್ತಾರೆ. ಆ ಮಾತಿಗೆ ಸಾಕ್ಷಿ ಎನ್ನುವಂತೆ ಒಂದು ಅಘಾತಕಾರಿ ಘಟನೆ ಊಟಿಯಲ್ಲಿ ನಡೆದಿದೆ. ಕಾಡು ಪ್ರದೇಶದಲ್ಲಿ ಎಸ್ಟೇಟ್ ಒಂದರ ಒಳಗೆ ಬರಲು ಪ್ರಯತ್ನಿಸಿದ ಆನೆಗೆ ಇಬ್ಬರು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಊಟಿಯ ಮಸಿನಗುಡಿ ಕಾಡು ಪ್ರದೇಶದಲ್ಲಿ 40 ವರ್ಷದ ಆನೆಯೊಂದು ಜನವರಿ 19ರಂದು ಎಸ್ಟೇಟ್ ಒಂದರ ಒಳಗೆ ಬರಲು ಪ್ರಯತ್ನಿಸಿದೆ. ಈ ಸಮಯದಲ್ಲಿ ಎಸ್ಟೇಟ್ ಕಾವಲು ಕಾಯುತ್ತಿದ್ದ ರೈಮಾನ್ ಮತ್ತು ಪ್ರಶಾಂತ್ ಒಂದು ಟೈಯರ್ಗೆ ಬೆಂಕಿ ಹಚ್ಚಿ ಅದನ್ನು ಆನೆಯ ಮೇಲೆ ಎಸೆದಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದ ಟೈಯರ್ನ್ನು ಹೊತ್ತ ಆನೆ ನೋವಿನಿಂದ ಕೂಗಿಕೊಳ್ಳುತ್ತ ಸ್ವಲ್ಪ ದೂರ ಹೋಗಿದೆ. ಆನೆಯ ಕಿವಿ ಮತ್ತು ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿವೆ.
ಅಸ್ವಸ್ಥವಾಗಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ಕಂಡಿದ್ದು, ವೈದ್ಯಕೀಯ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ. ಆದರೆ ಅದಾಗಲೇ ಸುಟ್ಟ ಗಾಯದಿಂದ ಸಾಕಷ್ಟು ನೋವುಂಡಿದ್ದ ಆನೆ ಕೊನೆಯುಸಿರೆಳೆದಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಶಾಂತ್ ಮತ್ತು ರೈಮಾನ್ನನ್ನು ಬಂಧಿಸಲಾಗಿದೆ.