ಕುಂದಾಪುರ ಮೇ 05: ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಯುವತಿಯೊಬ್ಬಳು ಸಿದ್ದಾಪುರ ಗ್ರಾಮದ ಐರ್ಬೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಮೃತರನ್ನು ಅಶ್ವಿತಾ ಹುರಳಿ (21) ಎಂದು ಗುರುತಿಸಲಾಗಿದೆ.

ಹಾನಗಲ್ನ ಹಳ್ಳಿಬೈಲ್ ಗ್ರಾಮದ ಅಶ್ವಿತಾ ಅವರು ಕಳೆದ ನಾಲ್ಕು ತಿಂಗಳಿನಿಂದ ತಮ್ಮ ತಂಗಿ ಸುಶ್ಮಿತಾ ಅವರೊಂದಿಗೆ ಸಿದ್ದಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಶ್ವಿತಾ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಮೇ 4ರಂದು ಬೆಳಿಗ್ಗೆ 7 ಗಂಟೆಗೆ ಸುಶ್ಮಿತಾ ಅವರು ಎದ್ದು ನೋಡಿದಾಗ ಅಶ್ವಿತಾ ಅವರು ಕೋಣೆಯ ಒಳಗಿದ್ದರು. ಎಷ್ಟೇ ಬಾರಿ ಕರೆದರೂ ಬಾಗಿಲು ತೆಗೆಯದಿದ್ದಾಗ, ಸುಶ್ಮಿತಾ ಅವರು ಅಡುಗೆ ಕೋಣೆಯ ಗೋಡೆ ಹತ್ತಿ ಒಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಅಶ್ವಿತಾ ಅವರು ಚೂಡಿದಾರ್ ಶಾಲ್ನಿಂದ ಕಿಟಕಿಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಕ್ರಮಾಂಕ 12/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.