ಸಬ್ ಇನ್ಸ್ ಪೆಕ್ಟರ್ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಸುಳ್ಳು- ರಾಘವೇಂದ್ರ ಔರಾದಕರ್

ಉಡುಪಿ, ಜನವರಿ 16 : ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) 190 ಹುದ್ದೆಗಳ ನೇಮಕಾತಿ ಸಲುವಾಗಿ ನೇಮಕಾತಿ ಪ್ರಕ್ರಿಯೆಯನ್ವಯ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ಜನವರಿ 13 ರಂದು ಬೆಂಗಳೂರು ನಗರ, ಮೈಸೂರು ನಗರ, ಬೆಳಗಾವಿ, ದಾವಣೆಗೆರೆ ಮತ್ತು ಕಲಬುರಗಿ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿರುತ್ತದೆ.

ಸದರಿ ಲಿಖಿತ ಪರೀಕ್ಷೆಯ ಸಂಬಂಧ ಕೆಲವೊಂದು ಮಾಧ್ಯಮಗಳಲ್ಲಿ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿರುವ ಬಗ್ಗೆ ಪ್ರಸಾರವಾಗಿರುತ್ತದೆ. ಇದು ಕೇವಲ ವದಂತಿಯಾಗಿದ್ದು, ಕೆಲವು ವಂಚನೆಕೋರರು ಅಭ್ಯರ್ಥಿಗಳಿಗೆ ಮೋಸ ಮಾಡುವ ಸಲುವಾಗಿ ಪಿಎಸ್ಐ(ಸಿವಿಲ್) ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಮ್ಮಲ್ಲಿ ಲಭ್ಯವಿರುವುದಾಗಿ ನಂಬಿಸಿ, ಹಣಕ್ಕಾಗಿ ಅಭ್ಯರ್ಥಿಗಳನ್ನು ತಪ್ಪು ದಾರಿಗೆಳೆಯುವ ಸಂಚು ರೂಪಿಸಿ, ವಂಚನೆ ಮಾಡುವ ದೃಷ್ಟಿಯಿಂದ ಅಭ್ಯರ್ಥಿಗಳಿಗೆ ದಿಕ್ಕು ತಪ್ಪಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಕೆಲವೊಂದು ವಂಚನೆಕೋರರಿಗೆ ಸಿ.ಸಿ.ಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ಸದರಿ ಪರೀಕ್ಷೆಯು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಯಶಸ್ವಿಯಾಗಿ ನಡೆದಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಸುಳ್ಳು ವದಂತಿಗೆ ಕಿವಿಕೊಡದೆ ಸಮಾಧಾನದಿಂದಿರಬೇಕೆಂದು ಮತ್ತು ಆತಂಕ ಪಡುವ ಅಗತ್ಯವಿಲ್ಲವೆಂದು ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ರಾಘವೇಂದ್ರ ಔರಾದಕರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

2 Shares

Facebook Comments

comments