LATEST NEWS
ಶೃಂಗೇರಿ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ -ತಪ್ಪಿತಸ್ಥರ ವಿರುದ್ದ ಕಠಿಣಕ್ರಮಕ್ಕೆ ಸೂಚನೆ – ಶೋಭಾಕರಂದ್ಲಾಜೆ
ಚಿಕ್ಕಮಗಳೂರು : ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಬಲಾತ್ಕಾರ, ಅತ್ಯಾಚಾರ ಅತ್ಯಂತ ಖಂಡನೀಯವಾದುದು. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ತಪ್ಪಿತಸ್ತರನ್ನು ಬಂಧಿಸಲು, ಮತ್ತು ಬಾಲಕಿಗೆ ಸೂಕ್ತ ರಕ್ಷಣೆ ನೀಡಲು ಸೂಚಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಸುಮಾರು 30 ಮಂದಿ ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದ ಸಂಸದೆ ಈ ಪ್ರಕರಣ ಗಂಭೀರವಾಗಿದ್ದು, ಅಪ್ರಾಪ್ತ ಬಾಲಕಿಯ ಭವಿಷ್ಯದ ವಿಚಾರವಾಗಿರುವುದರಿಂದ, ಮಾಧ್ಯಮಕ್ಕೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದ ಅವರು
ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ತಕ್ಷಣದಲ್ಲಿಯೇ ತಪ್ಪಿತಸ್ತರನ್ನು ಪೊಲೀಸರು ಬಂಧಿಸಿರುತ್ತಾರೆ. ಬಾಲಕಿಯನ್ನು ಕರೆತಂದು ದುರುಪಯೋಗ ಮಾಡಿದ ಅವಳ ಚಿಕ್ಕಮ್ಮ ಎಂದು ಕರೆಯಲ್ಪಡುವ ಗೀತಳನ್ನು ಕೂಡ ಬಂಧಿಸಿ ವಿಚಾರಿಸಲಾಗುತ್ತಿದೆ.
SSLC ಓದುವ ಹುಡುಗಿ ತನ್ನ ಊರಿನಿಂದ ಇಲ್ಲಿಗೆ ಯಾಕೆ ಬಂದಳು? ಯಾಕೆ ಅವಳನ್ನು ಚಿಕ್ಕಮ್ಮ ದುರುಪಯೋಗ ಮಾಡಿದಳು? ಇದೇ ರೀತಿ ಇನ್ಯಾವ ಹುಡುಗಿಯ ಜೊತೆ ಗೀತಾ ಸಂಪರ್ಕ ಬೆಳೆಸಿದ್ದಾಳೆ ಎಂಬುದರ ಕುರಿತು ಕೂಡ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. ಪ್ರತಿನಿತ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಈ ಕೇಸನ್ನು ನಿಗಾವಹಿಸಿ ಗಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.