ಪುಣೆ, ಏಪ್ರಿಲ್ 26: ಆಸ್ಪತ್ರೆಗೆ ತೆರಳುವ ವೇಳೆ ರಸ್ತೆ ಮಧ್ಯೆ ವಿಪರೀತ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ವೈದ್ಯೆಯೊಬ್ಬರು ರಸ್ತೆಯಲ್ಲೇ ಹೆರಿಗೆ ಮಾಡಿಸಿ ಎರಡು ಜೀವವನ್ನು ಉಳಿಸಿದ ಘಟನೆವ ಪುಣೆ ಜಿಲ್ಲೆಯ ಶಿರೂರಿನಲ್ಲಿ ನಡೆದಿದೆ.

ಪುಣೆ ಜಿಲ್ಲೆಯ ಶಿರೂರು ತಾಲೂಕಿನ ‘ನಿರ್ಮಾಣ್ ಚೌಕ್’ ಎಂಬಲ್ಲಿ ಸುಪ್ರಿಯಾ ನಿತೇಶ್ ಕಾಳೆ ಎಂಬ 23 ವರ್ಷದ ಗರ್ಭಿಣಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದ ಅವರು ನೋವಿನಿಂದ ರಸ್ತೆಯಲ್ಲೇ ಕುಸಿದು ಬಿದಿದ್ದಾರೆ. ಈ ವೇಳೆ ಸ್ಥಳೀಯರು ಸಮೀಪದಲ್ಲೇ ಕ್ಲಿನಿಕ್ ಹೊಂದಿದ್ದ ಸ್ತ್ರೀರೋಗ ತಜ್ಞೆ ಡಾ. ಸುನೀತಾ ಪೋಟೆ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ವೈದ್ಯೆ ಸುನೀತಾ ಮಹಿಳೆಯ ಸ್ಥಿತಿಯನ್ನು ನೋಡಿ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಕಡಿಮೆ ಇದ್ದ ಕಾರಣ ಹಿನ್ನಲೆ ರಸ್ತೆಯಲ್ಲೇ ಜಾಗರೂಕತೆಯಿಂದ ಹೆರಿಗೆ ಮಾಡಿಸಿದರು. ತಾಯಿಯ ಹಿಮೋಗ್ಲೋಬಿನ್ ಮಟ್ಟ ಕುಸಿದಿದ್ದರೂ, ಡಾ. ಪೋಟೆ ಅವರ ಸಮಯಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದೆ. ಸದ್ಯ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.