ನವದೆಹಲಿ, ಮಾರ್ಚ್ 21: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು 22ನೇ ದಿನಕ್ಕೆ ಕಾಲಿಟ್ಟು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಸಂಭಾಷಣೆ ನಡೆಸಿದ್ದಾರೆ.

ಸಂವಾದದ ಆರಂಭದಲ್ಲಿ ಪ್ರಧಾನಿ ಮೋದಿಯವರು ಇರಾನ್ ಅಧ್ಯಕ್ಷರಿಗೆ ಹಾಗೂ ಅಲ್ಲಿನ ಜನತೆಗೆ ‘ಈದ್ ಉಲ್-ಫಿತರ್’ ಮತ್ತು ಇರಾನ್ ಹೊಸ ವರ್ಷ ‘ನೌರುಜ್’ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈ ಹಬ್ಬದ ಋತುವು ಸಂಘರ್ಷ ಪೀಡಿತ ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಮರಳಿ ತರಲಿ ಎಂದು ಉಭಯ ನಾಯಕರು ಆಶಿಸಿದರು. ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಉದ್ವಿಗ್ನತೆಯ ಕುರಿತು ಸುದೀರ್ಘವಾಗಿ ಚರ್ಚಿಸಿದ ಪ್ರಧಾನಿ ಮೋದಿ, ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಕಠಿಣ ಪದಗಳಲ್ಲಿ ಖಂಡಿಸಿದರು. “ಇಂತಹ ದಾಳಿಗಳು ಕೇವಲ ಪ್ರಾದೇಶಿಕ ಭದ್ರತೆಗೆ ಬೆದರಿಕೆ ಹಾಕುವುದಲ್ಲದೆ, ಜಾಗತಿಕ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮ ಬೀರಲಿದೆ,” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಂತರಾಷ್ಟ್ರೀಯ ಸಮುದ್ರ ಮಾರ್ಗಗಳ ಭದ್ರತೆಯ ಕುರಿತು ಮಾತನಾಡಿದ ಪ್ರಧಾನಿ, ನೌಕಾಯಾನ ಸ್ವಾತಂತ್ರ್ಯವನ್ನು ರಕ್ಷಿಸುವ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಜಾಗತಿಕ ವ್ಯಾಪಾರಕ್ಕೆ ಯಾವುದೇ ಅಡೆತಡೆಯಾಗದಂತೆ ಅಂತರಾಷ್ಟ್ರೀಯ ಜಲಮಾರ್ಗಗಳು ಮುಕ್ತವಾಗಿ ಮತ್ತು ಸಂಪೂರ್ಣ ಸುರಕ್ಷಿತವಾಗಿರಬೇಕು ಎಂಬ ಭಾರತದ ನಿಲುವನ್ನು ಅವರು ಪುನರುಚ್ಚರಿಸಿದರು. ಇದೇ ಸಂದರ್ಭದಲ್ಲಿ, ಇರಾನ್ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಇರಾನ್ ಸರ್ಕಾರ ನೀಡುತ್ತಿರುವ ನಿರಂತರ ಬೆಂಬಲವನ್ನು ಪ್ರಧಾನಿ ಶ್ಲಾಘಿಸಿದರು. ಈ ಮಹತ್ವದ ಮಾತುಕತೆಯ ವಿವರಗಳನ್ನು ಪ್ರಧಾನಿಯವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.