ಟೆಹ್ರಾನ್/ಬೀಜಿಂಗ್ ,ಏಪ್ರಿಲ್ 03 : ಸುಮಾರು ಏಳು ವರ್ಷಗಳ ಸುದೀರ್ಘ ಬಿಡುವಿನ ನಂತರ ಇರಾನ್ನಿಂದ ಭಾರತಕ್ಕೆ ಕಚ್ಚಾ ತೈಲ ಹೊತ್ತು ಬರುತ್ತಿದ್ದ ಬೃಹತ್ ಟ್ಯಾಂಕರ್ ಹಡಗು, ಭಾರತದ ಗಡಿ ತಲುಪುವ ಮೊದಲೇ ಏಕಾಏಕಿ ಮಾರ್ಗ ಬದಲಿಸಿ ಚೀನಾದತ್ತ ಪ್ರಯಾಣ ಬೆಳೆಸಿದೆ. ಹಡಗು ಟ್ರ್ಯಾಕಿಂಗ್ ಸಂಸ್ಥೆ ‘ಕೆಪ್ಲರ್’ ನೀಡಿರುವ ಈ ಮಾಹಿತಿಯು ಜಾಗತಿಕ ತೈಲ ಮಾರುಕಟ್ಟೆ ಮತ್ತು ರಾಜತಾಂತ್ರಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇರಾನ್ನಿಂದ ಕಚ್ಚಾ ತೈಲವನ್ನು ಹೊತ್ತು ಗುಜರಾತ್ನ ವಾಡಿನಾರ್ ಬಂದರಿಗೆ ಬರಬೇಕಿತ್ತು. ಈ ವಾರದ ಆರಂಭದಲ್ಲೇ ಹಡಗು ಭಾರತೀಯ ತೀರಕ್ಕೆ ತಲುಪುವ ನಿರೀಕ್ಷೆಯಿತ್ತಾದರೂ, ಗುಜರಾತ್ ತೀರಕ್ಕೆ ಹತ್ತಿರವಾಗುತ್ತಿದ್ದಂತೆ ತನ್ನ ಹಾದಿಯನ್ನು ಬದಲಿಸಿ ಈಗ ಚೀನಾದ ‘ಡೊಂಗೈಯಿಂಗ್’ ಬಂದರಿನತ್ತ ಸಾಗುತ್ತಿದೆ. ಹಡಗಿನಲ್ಲಿದ್ದ ಟ್ರಾನ್ಸ್ಪಾಂಡರ್ ಮತ್ತು ಎಐಎಸ್ (AIS) ತಾಂತ್ರಿಕ ವ್ಯವಸ್ಥೆಗಳು ಈಗ ಅಧಿಕೃತವಾಗಿ ಚೀನಾವನ್ನು ತನ್ನ ಗುರಿ ಎಂದು ತೋರಿಸುತ್ತಿವೆ.
ಈ ದಿಢೀರ್ ಮಾರ್ಗ ಬದಲಾವಣೆಗೆ ಪ್ರಮುಖವಾಗಿ ಹಣ ಪಾವತಿ ಮತ್ತು ವಿಮೆ ಸಮಸ್ಯೆಗಳು ಕಾರಣವೆಂದು ವಿಶ್ಲೇಷಿಸಲಾಗಿದೆ. ಅಮೆರಿಕದ ನಿರ್ಬಂಧಿತ ಪಟ್ಟಿಯಲ್ಲಿರುವ ಈ ಹಡಗಿಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಹಣ ವರ್ಗಾವಣೆ ಮತ್ತು ಹಡಗಿನ ಸುರಕ್ಷತಾ ವಿಮೆಯ ದಾಖಲೆಗಳಲ್ಲಿ ತಾಂತ್ರಿಕ ಲೋಪಗಳು ಕಂಡುಬಂದಿವೆ ಎನ್ನಲಾಗಿದೆ. ಭಾರತದ ಬಂದರು ಪ್ರವೇಶಿಸಲು ಅಗತ್ಯವಿರುವ ಕಠಿಣ ಶಿಷ್ಟಾಚಾರಗಳನ್ನು ಪೂರೈಸಲು ಹಡಗಿನ ಸಿಬ್ಬಂದಿ ವಿಫಲವಾದ ಹಿನ್ನೆಲೆಯಲ್ಲಿ ಅಂತಿಮ ಹಂತದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ, ತೈಲದ ಬೆಲೆ ನಿಗದಿ ಮತ್ತು ಪಾವತಿ ಅವಧಿಗೆ ಸಂಬಂಧಿಸಿದಂತೆ ಇರಾನ್ ಹಾಗೂ ಭಾರತೀಯ ಆಮದುದಾರರ ನಡುವೆ ಸಹಮತ ಮೂಡದ ಕಾರಣ, ದಾಸ್ತಾನನ್ನು ಚೀನಾಗೆ ತಿರುಗಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
2019ರ ನಂತರ ಇರಾನ್ನಿಂದ ತೈಲ ಆಮದು ಪುನಾರಂಭಿಸಲು ಭಾರತ ನಡೆಸಿದ್ದ ಪ್ರಯತ್ನಕ್ಕೆ ಇದು ಸದ್ಯದ ಮಟ್ಟಿಗೆ ಹಿನ್ನಡೆಯಾಗಿ ಕಂಡರೂ, ಅಮೆರಿಕದ ನಿರ್ಬಂಧಗಳ ಭೀತಿಯ ನಡುವೆ ಯಾವುದೇ ತಾಂತ್ರಿಕ ರಿಸ್ಕ್ ತೆಗೆದುಕೊಳ್ಳಲು ಭಾರತ ಮುಂದಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಇತ್ತ, ಚೀನಾದ ಖಾಸಗಿ ಸಂಸ್ಕರಣಾಗಾರಗಳು ಯಾವುದೇ ಅಡೆತಡೆಯಿಲ್ಲದೆ ಇರಾನ್ ತೈಲವನ್ನು ಸ್ವೀಕರಿಸುತ್ತಿರುವುದು ಈ ಬದಲಾವಣೆಗೆ ಪ್ರಮುಖ ಪ್ರೇರಣೆಯಾಗಿದೆ. ಈ ಬಗ್ಗೆ ಭಾರತದ ಪೆಟ್ರೋಲಿಯಂ ಸಚಿವಾಲಯದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲವಾದರೂ, ಜಾಗತಿಕ ತೈಲ ರಾಜಕೀಯದಲ್ಲಿ ಈ ಬೆಳವಣಿಗೆ ಮಹತ್ವದ ತಿರುವು ಪಡೆದುಕೊಂಡಿದೆ.