ಶಿವಮೊಗ್ಗ ಸೆಪ್ಟೆಂಬರ್ 11: ಬೈಕ್ ಮತ್ತು ಓಮ್ನಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇತ್ತೀಚೆಗಷ್ಟೆ ನಿಶ್ಚಿತಾರ್ಥವಾಗಿದ್ದ ಜೋಡಿ ಸಾವನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಅಂಬಾರಕೊಪ್ಪ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಬಸವನಗೌಡ (24) ಹಾಗೂ ರೇಖಾ (22) ಮೃತರು ಎಂಬುದು ತಿಳಿದು ಬಂದಿದೆ.


ರೇಖಾ ಹಾಗೂ ಬಸವನಗೌಡ ಅವರಿಗೆ ಕಳೆದ ಶ್ರಾವಣ ಮಾಸದಲ್ಲಿ ಮದುವೆ ನಿಶ್ಚಿತಾರ್ಥವಾಗಿತ್ತು. ಆದರೆ, ನಿನ್ನೆ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೇಖಾ ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ನಿವಾಸಿ. ಬಸವನಗೌಡ( 24) ಸೊರಬ ತಾಲೂಕು ಗಂಗೊಳ್ಳಿ ಗ್ರಾಮದ ನಿವಾಸಿ. ಮಂಗಳವಾರ ಮಾವನ ಮನೆಗೆ ಬಂದಿದ್ದ ಬಸವನಗೌಡ ನಿನ್ನೆ ಸಂಗಾತಿಯ ತವರೂರಾದ ಮತ್ತಿಕೋಟೆ ಗ್ರಾಮದಿಂದ ತೊಗರ್ಸಿ ದೇವಸ್ಥಾನಕ್ಕೆ ಬೈಕಿನಲ್ಲಿ ತೆರಳುತ್ತಿದ್ದರು.

ಈ ವೇಳೆ ಶಿಕಾರಿಪುರದ ಅಂಬಾರಕೊಪ್ಪ ಕ್ರಾಸ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಂಭಾಗದಲ್ಲಿ ವೇಗವಾಗಿ ಬರುತ್ತಿದ್ದ ಎಕೋ ವಾಹನ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ರೇಖಾಳ ತಂದೆ ಬಸವರಾಜಪ್ಪ ಮತ್ತು ಕುಟುಂಬದವರು, ‘ಬೈಕ್ ಬಿಟ್ಟು ಬಸ್​​ಗೆ ಹೋಗಿ ಎಂದು ಎಷ್ಟು ಸಲ ಹೇಳಿದರೂ ನನ್ನ ಮಾತು ಕೇಳದೇ ಬೈಕ್ ಮೇಲೆ ಹೊರಟ ಜೋಡಿ ಮದುವೆಯ ಮುಂಚೆ ಮಸಣ ಸೇರಿದ್ದಾರೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಹಸೆ ಮಣೆ ಏರುವ ಉತ್ಸಾಹದಲ್ಲಿ ಇದ್ದ ಜೋಡಿ ಜೀವಗಳು ವಿಧಿಯಾಟಕ್ಕೆ ಬಲಿಯಾಗಿ ಮಸಣ ಸೇರಿದ್ದು, ಎರಡೂ ಗ್ರಾಮಸ್ಥರಲ್ಲಿ ಬೇಸರ ತರಿಸಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information