Connect with us

    KARNATAKA

    ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ

    ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ

    ಉಡುಪಿ, ನವೆಂಬರ್ 3 (ಕರ್ನಾಟಕ ವಾರ್ತೆ) : ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಪ್ರಯುಕ್ತ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಮತದಾನ ಶಾಂತಿಯುತವಾಗಿತ್ತು.

    ಉಪ ಚುನಾವಣೆಯಲ್ಲಿ ಮತದಾನ ಮಾಡುವ ಕುರಿತಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಉತ್ಸಾಹ ಕಂಡುಬರಲಿಲ್ಲ, ರೈತರು ತಮ್ಮ ಬೆಳೆ ಕಟಾವಿನಲ್ಲಿ ತೊಡಗಿದ್ದದು ಹಾಗೂ ಹೆಚ್ಚಿನ ಬಿಸಿಲಿನ ಕಾರಣ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು, ಬೆಳಗ್ಗೆ 9 ಗಂಟೆಯವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.11.47 ಮತದಾನ ನಡೆದಿದ್ದು, 11 ಗಂಟೆಯ ವೇಳೆಗೆ 25.10 ಮತ್ತು 1 ಗಂಟೆಗೆ 37.77 , 3 ಗಂಟೆಗೆ 45.35 ಮತದಾನ ನಡೆದಿದ್ದಿತು, 4 ಗಂಟೆಯ ನಂತರ ನಂತರ ಚುರುಕುಗೊಂಡ ಮತದಾನ ಪ್ರಕ್ರಿಯೆಯಲ್ಲಿ 5 ಗಂಟೆಯ ವೇಳೆಗೆ ಶೇ.55 ಮತದಾನ ನಡೆದಿತ್ತು.

    ನಕ್ಸಲ್ ಬಾಧಿತ ತೊಂಬಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 766 ಮತದಾರರಿದ್ದು 10.40 ರ ವೇಳೆಗೆ 278 ಮಂದಿ ಮತದಾನ ಮಾಡಿದ್ದರು, ಅತಿಸೂಕ್ಷ್ಮ ಮತಗಟ್ಟೆಗಳಾದ ಮಚ್ಚಟ್ಟು ಶಾಲೆಯಲ್ಲಿ 1263 ಮತದಾರರಿದ್ದು 364 ಮಂದಿ ಮತ ಚಲಾಯಿಸಿದ್ದರು, ಹಳ್ಳಿಹೊಳೆ ಗ್ರಾಮದ ಇರಿಗೆ ಶಾಲೆಯ ಮತಗಟ್ಟೆಯಲ್ಲಿ 521 ಮತದಾರರಿದ್ದು 262 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು , ನಕ್ಸಲ್ ಬಾಧಿತ ಮತಗಟ್ಟೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸಶಸ್ತ್ರ ಸೀಮಾ ಬಲದ ಯೋಧರನ್ನು ನಿಯೋಜಿಸಲಾಗಿದ್ದಿತು.

    ವಾರಾಹಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯ ಒಟ್ಟು 942 ಮತದಾರರಲ್ಲಿ 289 ಮಂದಿ 11.30 ರ ವೇಳೆಗೆ ಮತದಾನ ಮಾಡಿದ್ದರು, 89 ವರ್ಷದ ಪುಟ್ಟ ಕುಲಾಲ್ ತಮ್ಮ ಮಗನ ನೆರವಿನಿಂದ ಬಂದು ಮತದಾನ ಮಾಡಿದರು.

    ಹಳ್ಳಿಹೊಳೆಯ ಸುಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 933 ಮತದಾರರಿದ್ದು 12.30 ರ ವೇಳೆಗೆ 380 ಮಂದಿ ಹಕ್ಕು ಚಲಾಯಿಸಿದ್ದು, ಹಳ್ಳಿಹೊಳೆ ಪಂಚಾಯತ್ ವ್ಯಾಪ್ತಿಯ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಆ ಗ್ರಾಮದ ಜನತೆ ಮತದಾನದಲ್ಲಿ ಭಾಗವಹಿಸಿರಲಿಲ್ಲ.

    ಮರವಂತೆ ಗ್ರಾಮ ಪಂಚಾಯತ್ ಆವರಣದಲ್ಲಿ ತೆರೆಯಲಾಗಿದ್ದ ಪಿಂಕ್ ಮತಗಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಿದರು, ಆಕರ್ಷಕವಾಗಿ ಪಿಂಕ್ ಬಣ್ಣದ ಬಟ್ಟೆ ಮತ್ತು ಬಲೂನ್ ಗಳಿಂದ ಸಿಂಗರಿಸಿದ್ದ ಈ ಮತಗಟ್ಟೆಗೆ ಮಹಿಳಾ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು, ಮತದಾನ ಕೇಂದ್ರಕ್ಕೆ ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಚಿಣ್ಣರ ಅಂಗಳ ನಿರ್ಮಿಸಿ , ವಿವಿಧ ಮಕ್ಕಳಿಗಾಗಿ ವಿವಿಧ ಆಟಿಕೆಗಳನ್ನು ಇಡಲಾಗಿದ್ದಿತು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮತಗಟ್ಟೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮತಗಟ್ಟೆಯಲ್ಲಿ 940 ಮತದಾರರಲ್ಲಿ 473 ಮಂದಿ ಮಹಿಳೆಯರಿದ್ದರು.

    ಉಪ್ಪಿನಕುದ್ರು ನಲ್ಲಿ ತೆರೆಯಲಾಗಿದ್ದ ವಿಧಾನಸಭಾ ಕ್ಷೇತ್ರದ ಏಕೈಕ ವಿಕಲ ಚೇತನ ಮತಗಟ್ಟೆಯಲ್ಲಿ , ವಿಕಲಚೇತನ ಸ್ನೇಹಿ ಟಾಯ್ಲೆಟ್, ರ್ಯಾಂಪ್, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ವ್ಯವಸ್ಥೆ ಮಾಡಲಾಗಿತ್ತು, ಇಲ್ಲಿನ ಮತಗಟ್ಟೆಯಲ್ಲಿ 21 ವಿಕಲಚೇತನರಿದ್ದು ಮದ್ಯಾಹ್ಮ 3.30 ವೇಳಗೆ 16 ಮಂದಿ ಮತ ಚಲಾಯಿದ್ದರು. ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಮತಗಟ್ಟೆಯ ಉಸ್ತುವಾರಿ ವಹಿಸಿಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply