ಶಿವಮೊಗ್ಗ , ಏಪ್ರಿಲ್ 13: ಎದುರಿಗೆ ಅಡ್ಡ ಬಂದ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಶಿಕಾರಿಪುರದ ತಾಲೂಕಿನ ಕುಮದ್ವತಿ ಕಾಲೇಜು ಮುಂಭಾಗದ ಮುಖ್ಯರಸ್ತೆಯಲ್ಲಿ ಇಂದು ಸಂಭವಿಸಿದೆ, ಬಸ್ನಲ್ಲಿದ್ದ ಸುಮಾರು 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಶಿಕಾರಿಪುರದ ಕುಮದ್ವತಿ ಕಾಲೇಜು ತಲುಪುತ್ತಿದ್ದಂತೆ, ರಸ್ತೆಯಲ್ಲಿದ್ದ ಹಂಪ್ (ವೇಗ ನಿಯಂತ್ರಕ) ತಪ್ಪಿಸಲು ಬೈಕ್ ಸವಾರನೊಬ್ಬ ಏಕಾಏಕಿ ಬಸ್ನ ಎಡ-ಬಲ ಭಾಗಗಳಲ್ಲಿ ನುಗ್ಗಿದ್ದಾನೆ ಎನ್ನಲಾಗಿದೆ. ಬೈಕ್ ಸವಾರನಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಬಸ್ಸನ್ನು ಬದಿಗೆ ತಿರುಗಿಸಿದಾಗ, ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದು ಪಕ್ಕದ ಗುಂಡಿಗೆ ಮಗುಚಿ ಬಿದ್ದಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಧಾವಿಸಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮೂವರು ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಂಬ ಮುರಿದು ಬಿದ್ದಿದ್ದು, ತಂತಿಗಳು ರಸ್ತೆಯ ಮೇಲೆ ಹರಡಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಮೆಸ್ಕಾಂ ಸಿಬ್ಬಂದಿ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅಪಘಾತದಿಂದಾಗಿ ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಕ್ರೇನ್ ಬಳಸಿ ಬಸ್ಸನ್ನು ತೆರವುಗೊಳಿಸಿದ ನಂತರ ಸಂಚಾರ ಸುಗಮವಾಯಿತು. ಸ್ಥಳಕ್ಕೆ ಶಿಕಾರಿಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.