Connect with us

    FILM

    ಸೈನಿಕರ ಪತ್ನಿಯರಿಗೆ ಅವಮಾನ; ಏಕ್ತಾ ಕಪೂರ್​ ವಿರುದ್ಧ ಅರೆಸ್ಟ್​ ವಾರೆಂಟ್​

    ಮುಂಬೈ, ಸೆಪ್ಟೆಂಬರ್ 29: ಕಿರುತೆರೆ, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ​ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಏಕ್ತಾ ಕಪೂರ್ ಒಡೆತನದ ‘ಆಲ್ಟ್​ ಬಾಲಾಜಿ’ ಒಟಿಟಿ ಮೂಲಕ ಹಲವಾರು ವೆಬ್​ ಸಿರೀಸ್​ಗಳು ನಿರ್ಮಾಣ ಆಗಿವೆ. ಈ ವೆಬ್​ ಸರಣಿಗಳು  ತುಂಬ ಬೋಲ್ಡ್​ ಆಗಿರುತ್ತವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈಗ ಇದೇ ವಿಚಾರವಾಗಿ ಏಕ್ತಾ ಕಪೂರ್​ ಮತ್ತು ಅವರ ತಾಯಿ ಶೋಭಾ ಕಪೂರ್​ ಮೇಲೆ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿದೆ.

    ‘ಎಕ್ಸ್ಎಕ್ಸ್​ಎಕ್ಸ್​’ ವೆಬ್​ ಸರಣಿಯಲ್ಲಿ ಸೈನಿಕರ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಕೇಸ್​ ದಾಖಲಾಗಿದೆ. ‘ಎಕ್ಸ್ ಎಕ್ಸ್​ ಎಕ್ಸ್​’ ವೆಬ್​ ಸೀರಿಸ್​ನ ಮೊದಲ ಸೀಸನ್​ 2018ರಲ್ಲಿ ಪ್ರಸಾರವಾಗಿತ್ತು. 2020ರ ಜನವರಿಯಲ್ಲಿ ಎರಡನೇ ಸೀಸನ್​ ಬಿಡುಗಡೆ ಆಯಿತು. ಇದರ ಪ್ರತಿ ಎಪಿಸೋಡ್​ಗಳಲ್ಲಿ ಬೇರೆ ಬೇರೆ ಕಥೆ ಇದೆ. ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳನ್ನು ಇಟ್ಟುಕೊಂಡು ಈ ಸಂಚಿಕೆಗಳು ಮೂಡಿಬಂದಿವೆ. ಇದರಲ್ಲಿ ಸೈನಿಕರ ಕುಟುಂಬಕ್ಕೆ ಹಾಗೂ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂದು ಮಾಜಿ ಸೈನಿಕರೊಬ್ಬರು ಕೇಸ್​ ದಾಖಲಿಸಿದ್ದಾರೆ.

    ಸೈನಿಕನ ಪತ್ನಿ ಬಗ್ಗೆ ಆಕ್ಷೇಪಾರ್ಹ ರೀತಿಯ ದೃಶ್ಯಗಳನ್ನು ಈ ವೆಬ್​ ಸರಣಿ ಹೊಂದಿದೆ ಎಂದು ಮಾಜಿ ಸೈನಿಕ ಶಂಭು ಕುಮಾರ್​ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್​ಗೆ ಸಮನ್ಸ್​ ಜಾರಿ ಮಾಡಲಾಗಿದೆ. ‘ವಿರೋಧ ವ್ಯಕ್ತವಾದ ಬಳಿಕ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಲಾಗಿದೆ ಎಂದು ಏಕ್ತಾ ಕಪೂರ್​ ಹಾಗೂ ಶೋಭಾ ಕಪೂರ್​ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗದೇ ಇರುವುದಕ್ಕೆ ಅರೆಸ್ಟ್​ ವಾರೆಂಟ್​ ನೀಡಲಾಗಿದೆ’ ಎಂದು ದೂರುದಾರರ ಪರ ವಕೀಲರಾದ ರಿಷಿಕೇಶ್​ ಪಾಠಕ್​ ತಿಳಿಸಿದ್ದಾರೆ.

    ಲಾಕ್​ಡೌನ್​ ಬಳಿಕ ಒಟಿಟಿ ಪ್ರಾಬಲ್ಯ ಹೆಚ್ಚಾಯಿತು. ಸೆನ್ಸಾರ್​ನ ಹಂಗಿಲ್ಲ ಎಂಬ ಕಾರಣಕ್ಕೆ ತುಂಬ ಬೋಲ್ಡ್​ ಆದಂತಹ ಕಂಟೆಂಟ್​ಗಳನ್ನು ಕೆಲವು ಒಟಿಟಿಗಳು ಬಿತ್ತರಿಸುತ್ತಿವೆ. ಕಳೆದ ವರ್ಷ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅರೆಸ್ಟ್​ ಆಗಲು ಇದೇ ಕಾರಣ. ಅವರು ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಆದರೆ ಅವರು ಮಾಡಿದ್ದು ಅಶ್ಲೀಲ ಸಿನಿಮಾ ಅಲ್ಲ, ಬರೀ ಬೋಲ್ಡ್​ ಸಿನಿಮಾಗಳು ಎಂದು ಕೆಲವರು ವಾದಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply