ಕಳಪೆ ಸಂಸದ ಎನ್ನುವ ಆರ್ ಎಸ್ಎಸ್ ಮುಖಂಡರೇ ನಳಿನ್ ನನ್ನು ಸಂಸದ ಸ್ಥಾನಕ್ಕೆ ಆಯ್ಕೆ ಮಾಡಿದ್ದು – ಶಕುಂತಲಾ ಶೆಟ್ಟಿ

ಪುತ್ತೂರು ಎಪ್ರಿಲ್ 12: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಕಳಪೆ ಸಂಸದ ಎನ್ನುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೇ ನಳಿನ್ ಅವರನ್ನು ಸಂಸದ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ನಳಿನ್ ಕುಮಾರ್ ಎಂದೂ ಆಕಾಂಕ್ಷಿಯಾಗಿರಲಿಲ್ಲ ಎಂದು ಕಾಂಗ್ರೇಸ್ ಮುಖಂಡೆ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಏನೂ ಗೊತ್ತಿಲ್ಲದ ವ್ಯಕ್ತಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಿದ್ದು, ಇದೀಗ ಇದೇ ಸಂಘದ ಮುಖಂಡರು ನಳಿನ್ ಕುಮಾರ್ ಕಟೀಲ್ ರನ್ನು ಕಳಪೆ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾನು ಬಿಜೆಪಿಯಲ್ಲಿ ಇದ್ದ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪ್ರಭಾವಿ ಆರ್.ಎಸ್.ಎಸ್ ಮುಖಂಡರೇ ನಳಿನ್ ಅವರ ಹೆಸರನ್ನು ಸಂಸದ ಸ್ಥಾನಕ್ಕೆ ಸೂಚಿಸಿದ್ದು, ನಳಿನ್ ಯಾವತ್ತೂ ತನ್ನನ್ನು ಸಂಸದರನ್ನಾಗಿ ಮಾಡಿ ಎಂದು ಪಕ್ಷದ ಹಿಂದೆ ಬಿದ್ದಿರಲಿಲ್ಲ ಎಂದ ಅವರು ಈ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ ರನ್ನು ಕಳಪೆ ಎಂದು ಹೇಳುವುದಿಲ್ಲ ಎಂದ ಅವರು ಬುದ್ಧಿವಂತರ ಜಿಲ್ಲೆಯಲ್ಲಿ ಇಷ್ಟೊಂದು ಅರ್ಹತೆಯಿದ್ದವರು ಇದ್ದರೂ ಯಾಕಾಗಿ ಅರ್ಹತೆ ಇಲ್ಲದವರನ್ನು, ಕನಿಷ್ಟ ಪಂಚಾಯತ್ ಸದಸ್ಯನೂ ಆಗದವರನ್ನು ಸಂಸದ ಸ್ಥಾನಕ್ಕೆ ಆಯ್ಕೆ ಮಾಡಿದ್ದರು ಎನ್ನುವುದನ್ನು ಜನರ ಮುಂದೆ ತಿಳಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.