Connect with us

MANGALORE

ಸಲಿಂಗ ಕಾಮಿ ಚಂದ್ರ ಕೆ. ಹೆಮ್ಮಾಡಿ ಮೇಲೆ ರಾಜ್ಯದಲ್ಲೇ ದಾಖಲೆಯ ಬರೋಬರಿ 21 ಪೋಕ್ಸೊ ಕೇಸ್

ಸಲಿಂಗ ಕಾಮಿ ಚಂದ್ರ ಕೆ. ಹೆಮ್ಮಾಡಿ ಮೇಲೆ ರಾಜ್ಯದಲ್ಲೇ ದಾಖಲೆಯ ಬರೋಬರಿ 21 ಪೋಕ್ಸೊ ಕೇಸ್

ಉಡಪಿ ಡಿಸೆಂಬರ್ 3: ಬಾಲಕರನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಮೇಲೆ ಇದುವರೆಗೆ 21 ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದು ಇದು ರಾಜ್ಯದಲ್ಲೆ ದಾಖಲೆಯಾಗಿದೆ.

ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯ ಚಂದ್ರ ಕೆ.ಹೆಮ್ಮಾಡಿ (40) ರಾಜ್ಯಮಟ್ಟದ ಪತ್ರಿಕೆಯ ಬಿಡಿ ವರದಿಗಾರ ನಾಗಿದ್ದು ಶಾಲಾ ಸಮಾರಂಭಗಳಿಗೆ ವರದಿ ಮಾಡಲು ತೆರಳುತ್ತಿದ್ದ ಸಂದರ್ಭ ಆರೋಪಿಯು ಬಾಲಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಬಾಲಕರ ಜತೆ ಆತ್ಮೀಯವಾಗಿ ಬೆರೆತು, ವಿಶ್ವಾಸ ಗಳಿಸುತ್ತಿದ್ದ.

ನಂತರ ಮಕ್ಕಳ ಅಭಿರುಚಿಯನ್ನು ಗುರುತಿಸಿ ಗಾಯನ, ಫೊಟೊಗ್ರಪಿ, ನೃತ್ಯ ಹೇಳಿಕೊಡುವುದಾಗಿ ಸೆಳೆಯುತ್ತಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸೆಕ್ಸ್‌ ಬಗ್ಗೆ ಮಾತನಾಡುತ್ತಿದ್ದ. ಪೋರ್ನ್‌ ವಿಡಿಯೋ ಹಾಗೂ ಫೋಟೊಗಳನ್ನು ತೋರಿಸಿ ಪ್ರಚೋದಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಬಳಿಕ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಸುತ್ತಿದ್ದ.

ಹೀಗೆ, ಹಲವು ವರ್ಷಗಳಿಂದ ಆರೋಪಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಕರಣದ ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬೈಂದೂರಿನಲ್ಲಿ ಬಾಲಕನೊಬ್ಬ ಮಾನಸಿಕ ಆಘಾತಕ್ಕೊಳಗಾಗಿದ್ದ. ಪೋಷಕರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವ ವಿಚಾರ ಬಯಲಾಗಿತ್ತು. ತಕ್ಷಣ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದರು.

ಘಟನೆಯ ಸಂಪೂರ್ಣ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆರೋಪಿ ಚಂದ್ರ ಕೆ. ಹೆಮ್ಮಾಡಿಯ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದೊಂದೆ ಹೊರಗಡೆ ಬರುತ್ತಿದೆ.

ಈ ವರೆಗೆ ಚಂದ್ರ ಕೆ. ಹೆಮ್ಮಾಡಿ ಮೇಲೆ 21 ಪೋಕ್ಸೊ ಪ್ರಕರಣ ದಾಖಲಾಗಿದ್ದು, ಇದು ರಾಜ್ಯದಲ್ಲೇ ದಾಖಲೆ ಎಂದು ಹೇಳಲಾಗುತ್ತಿದೆ. ಒಬ್ಬ ವ್ಯಕ್ತಿಯ ಮೇಲೆ ಇಷ್ಟು ಪೋಕ್ಸೋ ಪ್ರಕರಣ ದಾಖಲಾಗಿದ್ದು ಇದೇ ಮೊದಲ ಬಾರಿಗೆ ಎಂದು ಹೇಳಲಾಗಿದೆ.

Facebook Comments

comments