Connect with us

    LATEST NEWS

    ಪ್ರಧಾನಿ ಮೋದಿ ಜನ್ಮದಿನವನ್ನು  ‘ಸೇವಾ ಸಪ್ತಾಹ’ ದ ಮೂಲಕ ಬಿಜೆಪಿ ಆಚರಣೆ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮುಂದಿನ ತಿಂಗಳು ಒಂದು ವಾರ ಕಾಲ ‘ಸೇವಾ ಸಪ್ತಾಹ’ ಕಾರ್ಯಕ್ರಮವನ್ನು ಆಯೋಜಿಸಲು ಬಿಜೆಪಿ ಮುಂದಾಗಿದೆ.

    ಬಿಜೆಪಿಯು ಸೆಪ್ಟೆಂಬರ್‌ 14ರಿಂದ 20ರ ವರೆಗೆ ‘ಸೇವಾ ಸಪ್ತಾಹ’ ಆಚರಿಸುವ ಮೂಲಕ ಸೆಪ್ಟೆಂಬರ್ 17ರಂದು ಮೋದಿ ಅವರ ಜನ್ಮದಿನವನ್ನು ಆಚರಿಸಲಿದೆ. ಈ ವೇಳೆ ದೇಶದಾದ್ಯಂತ ಬಿಜೆಪಿ ನಾಯಕರು ಪಕ್ಷದ ವತಿಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನೆರವೇರಿಸಲಿದ್ದಾರೆ ಎನ್ನಲಾಗಿದೆ. ‘ಸೇವಾ ಸಪ್ತಾಹ’ ಸಂದರ್ಭ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಬಗ್ಗೆ ಈಗಾಗಲೇ ರಾಜ್ಯ ಘಟಕಗಳ ಮುಖ್ಯಸ್ಥರಿಗೆ ಪಕ್ಷವು ಸುತ್ತೋಲೆ ಕಳುಹಿಸಿದೆ.

    ಮೋದಿ ಅವರ 70ನೇ ವರ್ಷದ ಜನ್ಮದಿನ ಇದಾಗಿರುವುದರಿಂದ ‘ಥೀಮ್ ಸೆವೆಂಟಿ’ಗೆ ಅನುಗುಣವಾಗಿ ರಾಜ್ಯಗಳು ಆಯೋಜಿಸಬೇಕಿರುವ ಎಪ್ಪತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳ ಪಟ್ಟಿಯನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ರಾಜ್ಯ ಘಟಕಗಳ ಮುಖ್ಯಸ್ಥರಿಗೆ ರವಾನಿಸಿದ್ದಾರೆ.

    ಸುತ್ತೋಲೆಯ ಪ್ರಕಾರ ಕಾರ್ಯಕ್ರಮಗಳ ಪಟ್ಟಿಯಲ್ಲಿ, ಪ್ರತಿ ತಾಲ್ಲೂಕು ವ್ಯಾಪ್ತಿಯಲ್ಲಿ ಕೋವಿಡ್–19 ನಿರ್ದೇಶನಗಳಿಗೆ ಅನುಗುಣವಾಗಿ 70 ವಿಶೇಷ ಸಾಮರ್ಥ್ಯದ ವ್ಯಕ್ತಿಗಳಿಗೆ ಕೃತಕ ಕೈ-ಕಾಲುಗಳ ಜೋಡಣೆ, 70 ಅಂಧರಿಗೆ ಕನ್ನಡಕ ವಿತರಣೆ, 70 ಆಸ್ಪತ್ರೆಗಳ ರೋಗಿಗಳಿಗೆ ಹಾಗೂ ಬಡವರಿಗೆ ಹಣ್ಣು ವಿತರಣೆ ಮಾಡಲಾಗುವುದು.

    ಪ್ರತಿಯೊಂದು ಘಟಕದ ವ್ಯಾಪ್ತಿಯಲ್ಲಿ ಅಗತ್ಯವಿರುವ 70 ಕೋವಿಡ್–19 ಸೋಂಕಿತರಿಗೆ ಪ್ಲಾಸ್ಮಾ ದಾನಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಲಾಗಿದೆ.

    ದೊಡ್ಡ ರಾಜ್ಯಗಳಲ್ಲಿ ಕನಿಷ್ಠ 70 ಮತ್ತು ಸಣ್ಣ ರಾಜ್ಯಗಳ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ರಕ್ತದಾನ ಶಿಬಿರ ಆಯೋಜಿಸುವಂತೆ ಬಿಜೆಪಿ ಯುವ ಮೋರ್ಚಾಗೆ ಸೂಚಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಪ್ರತಿ ಬೂತ್‌ ಮಟ್ಟದಲ್ಲಿ 70 ಸಸಿಗಳನ್ನು ನೆಡುವಂತೆ ಕೋರಲಾಗಿದೆ. ಪ್ರತಿ ಜಿಲ್ಲೆಯ 70 ಹಳ್ಳಿಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸುವಂತೆ, ಪ್ಲಾಸ್ಟಿಕ್ ನಿರ್ಮೂಲನೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

    70ನೇ ಜನ್ಮದಿನದಂದು ಮೋದಿ ಅವರ ‘ಲೈವ್‌ ಅಂಡ್‌ ಮಿಷನ್‌’ ಸಮ್ಮೇಳನವನ್ನು ವೆಬಿನಾರ್‌ ಮೂಲಕ ಆಯೋಜಿಸಲಾಗುವುದು.

    ದೇಶದಾದ್ಯಂತ ಎಲ್ಲಾ ಸಂಸದರು, ಶಾಸಕರು ಮತ್ತು ಜನ ಪ್ರತಿನಿಧಿಗಳು ಕೋವಿಡ್‌–19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ‘ಸೇವಾ ಸಪ್ತಾಹ’ದಲ್ಲಿ ಭಾಗವಹಿಸಬೇಕು. ಕೋವಿಡ್–19 ಸೋಂಕು ಹರಡುತ್ತಿರುವುದರಿಂದಾಗಿ ಪ್ರಧಾನಿ ಮೋದಿ ಅವರು ಮಾಡಿರುವ ಸಾಧನೆಯ ಬಗ್ಗೆ ಪ್ರದರ್ಶನಗಳನ್ನು ಏರ್ಪಡಿಸಲು ಸಾಧ್ಯವಾಗದು. ಹಾಗಾಗಿ ಸಾಮಾಜಿಕ ಮಾಧ್ಯಮದ ಮೂಲಕ ಈ ಕಾರ್ಯಕ್ರಮದ ಪ್ರಚಾರ ನಡೆಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply