KARNATAKA
ಉಡುಪಿಯಲ್ಲಿ ಪಡಿತರಕ್ಕೆ ಸರ್ವರ್ ಕಾಟ, ಕ್ಯೂನಲ್ಲಿ ನಿಂತ ಗ್ರಾಹಕ ಕಂಗಾಲ್..!
ಉಡುಪಿ: ರಾಜ್ಯ ಸರಕಾರ ನೀಡುವ ಪಡಿತರ ಪಡೆಯಲು ಜನ ಕ್ಯೂನಲ್ಲಿ ನಿಂತು ಕಂಗಾಲ್ ಆಗುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ದೈನಂದಿನ ಕೆಲಸ ಕಾರ್ಯ ಬಿಟ್ಟು ರೇಷನ್ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರು ಮಾತ್ರ ಕಣ್ಮುಚ್ಚಿ ಕೂತಿದ್ದಾರೆ.
ಇದಕ್ಕೆ ಮೂಲ ಕಾರಣ ಸರ್ಕಾರಿ ಸರ್ವರ್ ಸಮಸ್ಯೆ, ಸರ್ವರ್ ಆಗಾಗ ಕೈಕೊಡುವುದರಿಂದ ಬೆರಳಚ್ಚು ಪಡೆಯಲು ಹರ ಸಾಹಸ ಪಡುವಂತಾಗಿದೆ. ಇದರಿಂದ ನ್ಯಾಯಬೆಲೆ ಅಂಗಡಿಯ ಎದುರು ಗ್ರಾಹಕರು ಪ್ರತಿ ನಿತ್ಯ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ರಾಜ್ಯದಲ್ಲಿ 20,464 ನ್ಯಾಯಬೆಲೆ ಅಂಗಡಿಗಳಿವೆ. 1 ಕೋಟಿ 50 ಲಕ್ಷಕ್ಕೂ ಹೆಚ್ಚು ಪಡಿತರ ಕಾರ್ಡ್‌ಗಳಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಪ್ ಸೇಲ್ (ಇ-ಪಿಒಎಸ್) ಯಂತ್ರಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್‌ಲೈನ್ ವ್ಯವಸ್ಥೆಗೆ ಇಲಾಖೆ ನೂತನ ಸರ್ವರ್ ಅಳವಡಿಸಿದೆ. ಅದರ ದೋಷದಿಂದಾಗಿ ರಾಜ್ಯಾದ್ಯಂತ ಸಾರ್ವಜನಿಕರ ಪಡಿತರ ವಿತರಣೆ ವ್ಯವಸ್ಥೆ ಹಳ್ಳಹಿಡಿದಿದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಮುಂಚಿನ ವ್ಯವಸ್ಥೆಯಂತೆ ಪಡಿತರ ವಿತರಣೆಗೆ ಬಯೋಮೆಟ್ರಿಕ್ ಹಾಗೂ ಮೊಬೈಲ್ ಒಟಿಪಿ ಮೂಲಕ ಗ್ರಾಹಕರಿಗೆ ಪಡಿತರ ವಿತರಣೆ ಆಗುತ್ತಿತ್ತು. ಇದೀಗ ಮೊಬೈಲ್ ಒಟಿಪಿ ಸಂಪೂರ್ಣ ಬಂದ್ ಆಗಿದೆ. ಬಯೋಮೆಟ್ರಿಕ್ ಕಾರ್ಯ ಎನ್‌ಐಸಿಯಿಂದ ನಿರ್ವಹಿಸಲಾಗುತ್ತಿತ್ತು. ಇದೀಗ ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್‌ಗೆ ನೂತನ ಸರ್ವರ್ ಅಳವಡಿಸಿದ್ದೇ ಇಷ್ಟೇಲ್ಲ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕಾಗಿದ್ದ ಜನಪ್ರತಿನಿಧಿಗಳು ಒಬ್ಬರು ಮತ್ತೊಬ್ಬರ ಮೇಲೆ ಕೆಸರೆರಚಾಟದಲ್ಲಿ ಬಿಜಿಯಾಗಿದ್ದಾರೆ. ಸಂತ್ರಪ್ತಿಯ ಜೀವನಕ್ಕೆ ಓಟು ಹಾಕಿದ ಮತದಾರ ರೇಷನ್ ಅಂಗಡಿ, ಸರ್ಕಾರಿ ಕಚೇರಿಗಳ ಬಾಗಿಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
You must be logged in to post a comment Login