ಹೊಸಪೇಟೆ ಎಪ್ರಿಲ್ 19: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನಪ್ಪಿದ ಘಟನೆ ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬೆಳ್ಳುಳ್ಳಿ ತುಂಬಿಕೊಂಡು ಹರಿಯಾಣದಿಂದ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಮೊದಲಿಗೆ ಕಾರ್ಗೆ ಡಿಕ್ಕಿ ಹೊಡೆದಿದೆ. ನಂತ್ರ ಸರ್ಕಾರಿ ಬಸ್ ಹಾಗೂ ಮೂರು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ.

ಅಪಘಾತದ ತೀವ್ರತೆಗೆ ಕಾರೊಂದು ಸಂಪೂರ್ಣ ಅಪ್ಪಚ್ಚಿಯಾಗಿದ್ದರೆ, ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಾಹ್ನವಿ ಎಸ್. ಹಾಗೂ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ
ಅಪಘಾತದ ಪರಿಣಾಮವಾಗಿ ಹೆದ್ದಾರಿಯಲ್ಲಿ ಎರಡೂ ಬದಿಗಳಲ್ಲಿ ಸುಮಾರು ಮೂರು ಕಿಲೋ ಮೀಟರ್ವರೆಗೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಟ್ರಾಫಿಕ್ ತಿಳಿಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.