ಬೆಂಗಳೂರು ಫೆಬ್ರವರಿ 16: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಕಿರುತೆರೆ ನಟಿ ರಶ್ಮಿ ಲೀಲಾ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಲಂಗ್ ಟ್ರಾನ್ಸ್ಪ್ಲಾಂಟ್ಗೆ ಒಳಗಾಗಿದ್ದ ನಟಿ ರಶ್ಮಿ ಲೀಲಾ ಕೆಲ ಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ರಶ್ಮಿ ಲೀಲಾ ಇಹಲೋಕ ತ್ಯಜಿಸಿದ್ದಾರೆ.

ಶ್ವಾಸಕೋಶದ ಕಾಯಿಲೆಯಾದ ಪಲ್ಮನರಿ ಫೈಬ್ರೋಸಿಸ್ನಿಂದ ಬಳಲುತ್ತಿದ್ದ ಅವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಸೂಕ್ತ ದಾನಿಗಳು ಬಂದ ಹಿನ್ನಲೆಯಲ್ಲಿ ಶ್ವಾಸಕೋಶದ ಟ್ರಾನ್ಸ್ ಪ್ಲಾಂಟ್ ಕೂಡ ಮಾಡಲಾಗಿತ್ತು ಎನ್ನಲಾಗಿದೆ.
ಆ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿರುತೆರೆ ನಟಿ ರಶ್ಮಿ ಲೀಲಾಗೆ ಚಿಕಿತ್ಸೆ ಮುಂದುವರೆದಿತ್ತು. ಆದರೇ ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ, ‘’ಸೂಕ್ತ ದಾನಿದಾರರು ಲಭ್ಯರಾಗಿದ್ದು, ನಾನು ಲಂಗ್ ಟ್ರಾನ್ಸ್ಪ್ಲಾಂಟ್ (ಫೆಫಸು ಪ್ರತಿರೋಪಣ) ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ. ಯಶಸ್ವಿಯಾದ ಶಸ್ತ್ರಚಿಕಿತ್ಸೆ ಮತ್ತು ಸುಗಮವಾದ, ಆರೋಗ್ಯಕರ ಚೇತರಿಕೆಗೆ ನಿಮ್ಮ ಪ್ರಾರ್ಥನೆಗಳು, ಆಶೀರ್ವಾದಗಳು ಮತ್ತು ಸದ್ಭಾವನೆಗಳನ್ನು ಹೃದಯಪೂರ್ವಕವಾಗಿ ಕೋರುತ್ತೇನೆ. ಈ ಚಿಕಿತ್ಸೆಗೆ ಬಹಳಷ್ಟು ವೈದ್ಯಕೀಯ ವೆಚ್ಚಗಳು ಅಗತ್ಯವಿದ್ದು, ಈ ಪ್ರಯಾಣವನ್ನು ನಾವು ಒಬ್ಬರೇ ಎದುರಿಸಲು ಸಾಧ್ಯವಿಲ್ಲ. ಕೈಮುಗಿದು, ನೀವು ನೀಡಬಹುದಾದ ಯಾವುದೇ ಆರ್ಥಿಕ ಸಹಾಯವನ್ನು ವಿನಮ್ರವಾಗಿ ವಿನಂತಿಸುತ್ತೇನೆ’’ ಎಂದು ರಶ್ಮಿ ಲೀಲಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದರು.
‘ಬಾಂಧವ್ಯ’, ‘ಕಾವ್ಯಾಂಜಲಿ’, ‘ಗಗನ ಕುಸುಮ’, ‘ಪಾಪಾ ಪಾಂಡು’, ‘ಗೋಧೂಳಿ’, ‘ಕವಲುದಾರಿ’, ‘ಮಗಳು ಜಾನಕಿ’, ‘ಕನ್ನಡಿ’, ‘ಹೊಗ್ಲಿ ಬಿಡಿ ಸರ್’, ‘ಆನಂದ ಸಾಗರ’ ಮುಂತಾದ ಕನ್ನಡ ಸೀರಿಯಲ್ಗಳಲ್ಲಿ ರಶ್ಮಿ ಲೀಲಾ ಅಭಿನಯಿಸಿದ್ದರು. ರಶ್ಮಿ ಲೀಲಾ ಪತಿ ಸಾರಕ್ಕಿ ಮಂಜು ಕನ್ನಡ ಕಿರುತೆರೆಯಲ್ಲಿ ಬರಹಗಾರರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದಾರೆ. ರಶ್ಮಿ ಲೀಲಾ – ಸಾರಕ್ಕಿ ಮಂಜು ದಂಪತಿಗೆ ಓರ್ವ ಪುತ್ರಿ ಇದ್ದಾಳೆ.