ಮಂಗಳೂರು ಡಿಸೆಂಬರ್ 30: ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಕಂಬಳದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ವೇದಿಕೆಯಲ್ಲೇ ಅವಮಾನ ಮಾಡಿರುವ ಘಟನೆ ನಡೆದಿದೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರು ಎಂದಿನಂತೆ ಮಂಗಳೂರು ಕಂಬಳದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು. ರಾತ್ರಿ 11 ಗಂಟೆಯ ಸುಮಾರಿಗೆ ಅರುಣ್ ಎನ್ನುವವರು   ಮೈಕ್ ಪಡೆದು ಕಡಂಬರಿಗೆ ನೋಡಿ “ನೀವು ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ, ಇಲ್ಲಿ ಕೋಣ ಬಿಡೋಕಿದೆ.. ನಾನು ಅರುಣ್ ಶೆಟ್ಟಿ ಮಾತಾಡೋದು” (ಈ ಒಂತೆ ಮನಿಪಂದೆ ಕುಲ್ವನಾ, ಮುಲ್ಪ ಎರು ಬುಡ್ಯೆರೆ ಉಂಡು, ಯಾನ್ ಅರುಣ್ ಶೆಟ್ಟಿ ಪಾತೆರುನಿ) ಎಂದು ಏಕವಚನದಲ್ಲಿ ಗರ್ವದಿಂದ ಹೇಳಿದ್ದಾಗಿ ವರದಿಯಾಗಿದೆ. ಇದಕ್ಕೆ ಸಮಾಧಾನದಿಂದಲೇ ಉತ್ತರಿಸಿದ ಕಡಂಬ ಅವರು, “ನಾವು ಮೈಕ್ ಬಂದ್ ಮಾಡಿ ಕೂರುತ್ತೇವೆ, ನೀವು ಯಾವಾಗ ಬೇಕಾದರೂ ಕೋಣ ಬಿಡಿ” (ಎಂಕ್ಲು ಮೈಕ್ ಬಂದ್ ಮಲ್ತ್‌ದ್ ಕುಲ್ಲುವ, ನಿಕ್ಲ್ ಏಪ ಬೋಡಾಂಡಲ ಎರು ಬುಡ್ಲೆ) ಎಂದು ತಿರುಗೇಟು ನೀಡಿದ್ದಾರೆ.


ಹಿರಿಯ ಕಂಬಳ ಹೋರಾಟಗಾರ ಗುಣಪಾಲ ಕಡಂಬ ಅವರಿಗೆ ಈ ರೀತಿ ಅವಮಾನ ಮಾಡಿದ್ದಕ್ಕೆ ಕಂಬಳಾಭಿಮಾನಿಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಹಿರಿಯರಿಗೆ ಈ ರೀತಿ ಅಪಮಾನ ಮಾಡಿದ್ದು ಸರಿಯಲ್ಲ ಎಂದು ಕಮೆಂಟ್ಸ್ ಹಾಕುತ್ತಿದ್ದಾರೆ.

ಗುಣಪಾಲ್ ಕಡಂಬರು… ಕಂಬಳ ಕ್ಷೇತ್ರದ ಭೀಷ್ಮ ಅಭಿಮಾನಗಳ ಮನದಲ್ಲಿ ವಿರಾಜಮಾನರಾದ, ಸರ್ವವನ್ನೂ ಕಂಬಳಕ್ಕಾಗಿ ಮುಡಿಪಿಟ್ಟ ಕಡಂಬರಿಗೆ ಮಂಗಳೂರು ಕಂಬಳದಲ್ಲಾದ ಅವಮಾನವನ್ನು, ಒಬ್ಬ ತುಳುನಾಡಿನವರಾಗಿ, ಅವರ ಅಭಿಮಾನಿಗಳಾಗಿ ಖಂಡಿಸುತ್ತೇವೆ. ಕಂಬಳದ ಶಿಸ್ತನ್ನು ಮುರಿದು, ಕಡಂಬರಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ್ದು ಯಾರೇ ಆಗಿರಲಿ, ಕಂಬಳದ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿ
ಬಾಲ್ಯದಲ್ಲೇ ನಾವು ಕಡಂಬರ commentary ಕೇಳುತ್ತಾ ಬೆಳೆದವರು, ಅವರು ರೇಗಿದಾಗ, ನಕ್ಕು ಜೋರು ಮಾಡೋವಾಗೆಲ್ಲ, ಯಾರೋ ನಮ್ಮನೆಯ ಹಿರಿಯರೇ ಬೈದ ಅನುಭವವದು. “ಅವಮಾನ ಮಾಡಿದವನ ವಯಸ್ಸನ್ನೂ ಮೀರಿದ ಅನುಭವ ಕಡಂಬರದ್ದು”. ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿರು ಹಿರಿಯರು ನಮ್ಮ ಆಸ್ತಿ. ಅವರಿಗಾಗುವ ಅವಮಾನವನ್ನು ನಾವೆಂದೂ ಸಹಿಸೋದಿಲ್ಲ. ತನ್ನ ಇಳಿ ವಯಸ್ಸಿನಿಂದಲೂ ಕಂಬಳದಲ್ಲಿ ತೊಡಗಿಸಿಕೊಂಡ ಕಡಂಬರ ಜೊತೆ ನಾವಿದ್ದೇವೆ ನಾನಿದ್ದೇನೆ. “ಕಂಬಳ ಭೀಷ್ಮ ಕಡಂಬರು ನಮ್ಮ ಹೆಮ್ಮೆ…” ಎಂದು ಪೋಸ್ಟ್ ಹಾಕಿದ್ದಾರೆ.

 

Share Information